ಆಪರೇಷನ್ ಕಾವೇರಿ: ಸುಡಾನ್ ನಿಂದ ಭಾರತೀಯರ 10ನೇ ತಂಡದ ತೆರವು

Update: 2023-04-28 16:18 GMT
ಹೊಸದಿಲ್ಲಿ,ಎ.28: ಆಪರೇಷನ್ ಕಾವೇರಿ ಭರದಿಂದ ಸಾಗುತ್ತಿದ್ದು,ಸಂಘರ್ಷ ಪೀಡಿತ ಸುಡಾನ್ ನಲ್ಲಿ ಸಿಕ್ಕಿ ಹಾಕಿಕೊಂಡಿರುವ 135 ಭಾರತೀಯರ 10ನೇ ತಂಡವನ್ನು ಭಾರತೀಯ ವಾಯುಪಡೆಯ ವಿಮಾನದ ಮೂಲಕ ಪೋರ್ಟ್ ಸುಡಾನ್ ನಿಂದ ಸೌದಿ ಅರೇಬಿಯದ ಜಿದ್ದಾಕ್ಕೆ ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಶುಕ್ರವಾರ ಟ್ವೀಟಿಸಿದ್ದಾರೆ. ಇದಕ್ಕೂ ಮುನ್ನ ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ವಿ.ಮುರಳೀಧರನ್ ಅವರು,ಕಾರ್ಯಾಚರಣೆಯ ಸ್ಥಳ ಖರ್ತೂಮ್ಗೆ ಸಮೀಪವಿತ್ತು,ಹೀಗಾಗಿ ಎಂಟನೇ ತಂಡದ ತೆರವು ಕಾರ್ಯಾಚರಣೆಯು ಸವಾಲುಗಳಿಂದ ಕೂಡಿತ್ತು. ಈ ತಂಡದಲ್ಲಿದ್ದ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳ ಕುಟುಂಬ ಸದಸ್ಯರು ಸೇರಿದಂತೆ 121 ಭಾರತೀಯರನ್ನು ಸುಡಾನ್ನ ವಾಡಿ ಸೀಡ್ನಾದಿಂದ ಐಎಎಫ್ ವಿಮಾನದ ಮೂಲಕ ಜಿದ್ದಾಕ್ಕೆ ಸಾಗಿಸಲಾಗಿದೆ ಎಂದು ಟ್ವೀಟ್ನಲ್ಲಿ ತಿಳಿಸಿದ್ದರು. ಆಪರೇಷನ್ ಕಾವೇರಿಯಡಿ ಭಾರತವು ಖರ್ತೂಮ್ ನ ಸಂಘರ್ಷ ವಲಯಗಳು ಮತ್ತು ಇತರ ಪ್ರದೇಶಗಳಿಂದ ತನ್ನ ಪ್ರಜೆಗಳನ್ನು ಬಸ್ಗಳ ಮೂಲಕ ಪೋರ್ಟ್ ಸುಡಾನ್ಗೆ ಸಾಗಿಸುತ್ತಿದೆ. ಅಲ್ಲಿಂದ ಅವರನ್ನು ಐಎಎಫ್ ವಿಮಾನಗಳು ಮತ್ತು ಭಾರತೀಯ ನೌಕಾಪಡೆಯ ಹಡಗುಗಳಲ್ಲಿ ಜಿದ್ದಾಕ್ಕೆ ಕರೆದೊಯ್ಯಲಾಗುತ್ತಿದೆ. ಅಲ್ಲಿಂದ ಸ್ವದೇಶಕ್ಕೆ ರವಾನಿಸಲಾಗುತ್ತಿದೆ. ಖರ್ತೂಮ್ ಮತ್ತು ಪೋರ್ಟ್ ಸುಡಾನ್ ನಡುವಿನ ಅಂತರ ಸುಮಾರು 850 ಕಿ.ಮೀ.ಗಳಿದ್ದು,ಬಸ್ಗಳು ಈ ಅಂತರವನ್ನು ಕ್ರಮಿಸಲು 12ರಿಂದ 18 ಗಂಟೆಗಳನ್ನು ತೆಗೆದುಕೊಳ್ಳುತ್ತವೆ. ವಿ.ಮುರಳೀಧರನ್ ಅವರು ಜಿದ್ದಾದಲ್ಲಿ ಮೊಕ್ಕಾಂ ಹೂಡಿದ್ದು,ಆಪರೇಷನ್ ಕಾವೇರಿಯ ಮೇಲ್ವಿಚಾರಣೆ ವಹಿಸಿದ್ದಾರೆ. ಸುಡಾನ್ನಿಂದ ತೆರವುಗೊಳಿಸಲಾದ 246 ಭಾರತೀಯರನ್ನು ಹೊತ್ತ ಐಎಎಫ್ ವಿಮಾನವು ಗುರುವಾರ ಮುಂಬೈಗೆ ಬಂದಿಳಿದಿದೆ. ಪ್ರಯಾಣಿಕರ ಪೈಕಿ ಕನಿಷ್ಠ ಇಬ್ಬರು ಗಾಲಿಕುರ್ಚಿಗಳನ್ನು ಅವಲಂಬಿಸಿದ್ದರು. ಇದು ಮುಂಬೈಗೆ ಆಗಮಿಸಿದ ಮೊದಲ ತಂಡವಾಗಿದೆ.

Similar News