ಕರ್ನಾಟಕ ಚುನಾವಣಾ ಪ್ರಚಾರ ಬದಿಗಿಟ್ಟು, ಮಣಿಪುರದಲ್ಲಿ ನಿಮ್ಮ ಕರ್ತವ್ಯ ನಿಭಾಯಿಸಿ: ಪ್ರಧಾನಿಗೆ ಕಾಂಗ್ರೆಸ್ ಒತ್ತಾಯ

Update: 2023-05-05 16:57 GMT

ಹೊಸದಿಲ್ಲಿ, ಮೇ 5: ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ನಿಮ್ಮ ಸರ್ವ ಸಾಮರ್ಥ್ಯವನ್ನೂ ವಿನಿಯೋಗಿಸುವ ಬದಲು, ಹೊತ್ತಿ ಉರಿಯುತ್ತಿರುವ ಮಣಿಪುರಕ್ಕಾಗಿ ನೀವು ಮಾಡಬೇಕಾಗಿರುವ ಕರ್ತವ್ಯವನ್ನೂ ನಿಭಾಯಿಸಿ ಎಂದು ಕಾಂಗ್ರೆಸ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯನ್ನು ಒತ್ತಾಯಿಸಿದೆೆ. ಅದೇ ವೇಳೆ, ರಾಜ್ಯದಲ್ಲಿ ಶಾಂತಿ ಸ್ಥಾಪಿಸುವಲ್ಲಿ ‘‘ಸಂಪೂರ್ಣವಾಗಿ ವಿಫಲವಾಗಿರುವ’’ ಗೃಹ ಸಚಿವ ಅಮಿತ್ ಶಾರನ್ನು ಹುದ್ದೆಯಿಂದ ವಜಾಗೊಳಿಸಿ ಎಂದಿದೆ.

ಬುಡಕಟ್ಟು ಪಂಗಡಗಳು ಮತ್ತು ಬಹುಸಂಖ್ಯಾತ ಮೇಟಿ ಸಮುದಾಯದ ನಡುವಿನ ಸಂಘರ್ಷಕ್ಕೆ ಸಾಕ್ಷಿಯಾಗಿರುವ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರುವಂತೆಯೂ ಅದು ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.

‘‘ಮೋದೀಜಿ, ನೀವು ದೇಶದ ಚುನಾಯಿತ ಪ್ರಧಾನಿ. ಮಣಿಪುರದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಕರ್ನಾಟಕದ ಜನರೂ ನೋಡುತ್ತಿದ್ದಾರೆ. ಹೊತ್ತಿ ಉರಿಯುತ್ತಿರುವ ಮಣಿಪುರವನ್ನು ಮೊದಲು ರಕ್ಷಿಸಿ ಅಲ್ಲಿ ಶಾಂತಿ ಸ್ಥಾಪಿಸಬೇಕೆಂದು ಕರ್ನಾಟಕದ ಜನತೆ ಬಯಸುತ್ತಾರೆ’’ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಥ್ ಹೇಳಿದ್ದಾರೆ.

‘‘ಕರ್ನಾಟಕದಲ್ಲಿ ಮತಗಳನ್ನು ಯಾಚಿಸುವುದು ನಿಮ್ಮ ‘ಕರ್ತವ್ಯ’ಕ್ಕೆ ವಿರುದ್ಧವಾದುದು. ಬದಲಿಗೆ, ನಿಮ್ಮ ಕರ್ತವ್ಯ ಮಣಿಪುರವನ್ನು ರಕ್ಷಿಸುವುದು ಎನ್ನುವುದನ್ನು ನಿಮಗೆ ಜ್ಞಾಪಿಸಲು ನಾವು ಬಯಸುತ್ತೇವೆ’’ ಎಂದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದರು. ತನ್ನ ಆರೋಪವನ್ನು ಸಾಬೀತುಪಡಿಸಲು, ಈ ಹಿಂದೆ ಅಸ್ಸಾಮ್ ಮತ್ತು ಮಿರೆರಾಮ್ ಪೊಲೀಸ್ ಪಡೆಗಳ ನಡುವೆ ನಡೆದ ಸಂಘರ್ಷ ಮತ್ತು ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ನಡುವಿನ ಗಡಿ ಸಂಘರ್ಷವನ್ನು ಅವರು ಉಲ್ಲೇಖಿಸಿದರು.

‘‘ನಿಮ್ಮ ಹುದ್ದೆಯಲ್ಲಿ ಮುಂದುವರಿಯಲು ನಿಮಗೆ ಯಾವ ನೈತಿಕ ಅಧಿಕಾರವಿದೆ? ವಾಸ್ತವವಾಗಿ, ತಕ್ಷಣ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತವನ್ನು ವಿಧಿಸಬೇಕಾಗಿದೆ ಮತ್ತು ರಾಜ್ಯದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಪ್ರಯತ್ನಗಳನ್ನು ಮಾಡಬೇಕಾಗಿದೆ’’ ಎಂದು ಕಾಂಗ್ರೆಸ್ ನಾಯಕಿ ಹೇಳಿದರು.

Similar News