ಹಿಂಸಾಚಾರದಲ್ಲಿ 60 ಮಂದಿ ಮೃತ್ಯು, 1,700 ಮನೆಗಳು ಬೆಂಕಿಗೆ ಆಹುತಿ: ಮಣಿಪುರ ಸಿಎಂ

Update: 2023-05-09 07:18 GMT

ಹೊಸದಿಲ್ಲಿ: ಮೇ 3ರಂದು ಶುರುವಾದ ಹಿಂಸಾಚಾರದಲ್ಲಿ 60 ಮಂದಿ ಮೃತಪಟ್ಟಿದ್ದು, 231 ಮಂದಿ ಗಾಯಾಳುಗಳಾಗಿದ್ದಾರೆ ಎಂದು ಮಣಿಪುರ ಮುಖ್ಯಮಂತ್ರಿ ಬೀರೇನ್ ಸಿಂಗ್ ಪ್ರಕಟಿಸಿದ್ದಾರೆ.

ಹಿಂಸಾಚಾರದಲ್ಲಿ 1,700 ಮನೆಗಳು ಬೆಂಕಿಗೆ ಆಹುತಿಯಾಗಿದ್ದು, ಇದರಿಂದಾಗಿ 35,000 ಮಂದಿ ನಿರಾಶ್ರಿತರಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಹಿಂಸಾಚಾರವನ್ನು ದುರದೃಷ್ಟಕರ ಎಂದು ಬಣ್ಣಿಸಿರುವ ಬೀರೇನ್ ಸಿಂಗ್, ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಪ್ರಕಟಿಸಿದ್ದಾರೆ.

ಈ ನಡುವೆ ಹಲವಾರು ರಾಜ್ಯಗಳು ಮಣಿಪುರದಿಂದ ಜನರನ್ನು ತೆರವುಗೊಳಿಸಿದ್ದು, ಈ ಪೈಕಿ ಬಹುತೇಕರು ವಿದ್ಯಾರ್ಥಿಗಳಾಗಿದ್ದಾರೆ. ಈವರೆಗೆ ತೆರವುಗೊಂಡಿರುವವರ ಸಂಖ್ಯೆ 1,593 ಆಗಿದೆ ಎಂದು ಬೀರೇನ್ ಸಿಂಗ್ ಮಾಹಿತಿ ನೀಡಿದ್ದಾರೆ.

ಮೃತರ ಕುಟುಂಬಗಳಿಗೆ ರೂ. 5 ಲಕ್ಷ ಪರಿಹಾರ, ಗಂಭೀರವಾಗಿ ಗಾಯಗೊಂಡಿರುವವರಿಗೆ ರೂ. 2 ಲಕ್ಷ ಪರಿಹಾರ, ಸಾಧಾರಣವಾಗಿ ಗಾಯಗೊಂಡಿರುವವರಿಗೆ ರೂ. 25,000 ಪರಿಹಾರ, ಪ್ರಾಧಿಕಾರಗಳು ಮೌಲ್ಯಮಾಪನ ನಡೆಸಿದ ನಂತರ ಬೆಂಕಿಗೆ ಆಹುತಿಯಾಗಿರುವ ಮನೆಗಳಿಗೆ ರೂ. 2 ಲಕ್ಷದವರೆಗೆ ಪರಿಹಾರ ಹಾಗೂ ಬೆಂಕಿಯಿಂದ ಸುಟ್ಟು ಹೋಗಿರುವ/ಹಾನಿಯಾಗಿರುವ ಮನೆಗಳ ಪುನರ್ ನಿರ್ಮಾಣಕ್ಕೆ ನೆರವು ಒದಗಿಸಲಾಗುವುದು ಎಂದೂ ಬೀರೇನ್ ಸಿಂಗ್ ಪ್ರಕಟಿಸಿದ್ದಾರೆ.

Similar News