ಉಡುಪಿ: ಮತಗಟ್ಟೆಯೊಳಗೆ ಮೊಬೈಲ್ ನಿಷೇಧದ ಮಧ್ಯೆ ಮತ ಹಾಕುವ ವಿಡಿಯೋ ವೈರಲ್!

Update: 2023-05-10 11:05 GMT

ಉಡುಪಿ, ಮೇ 10: ಮತದಾನ ಕೇಂದ್ರದೊಳಗೆ ಮೊಬೈಲ್ ನಿಷೇಧ ಆದೇಶದ ಹೊರತಾಗಿಯೂ ಉಡುಪಿ ವಿಧಾನಸಭಾ ಕ್ಷೇತ್ರ ಮತಗಟ್ಟೆಯೊಂದರಲ್ಲಿ ಮತದಾನ ಮಾಡುವ ಇವಿಎಂ ಯಂತ್ರದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ಮತದಾರ ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಅವರಿಗೆ ಜೈ ಬಜರಂಗಿ ಎಂದು ಹೇಳಿ ಮತದಾನ ಮಾಡುತ್ತಿರುವುದು ಕಂಡುಬಂದಿದೆ. ಮತದಾರ ತನ್ನ ಬೆರಳಿಗೆ ಶಾಹಿ ಹಾಕಿ ಕೊಂಡಿರುವುದು ಕೂಡ ಸ್ಪಷ್ಟವಾಗಿ ವಿಡಿಯೋದಲ್ಲಿ ಕಾಣುತ್ತಿದೆ. 

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮತದಾನ ಕೇಂದ್ರದೊಳಗೆ ಮೊಬೈಲ್ ತೆಗೆದುಕೊಂಡು ಹೋಗಿ ವಿಡಿಯೋ ರೆಕಾರ್ಡ್ ಮಾಡಲು ಮತಗಟ್ಟೆ ಅಧಿಕಾರಿಗಳು ಹೇಗೆ ಅವಕಾಶ ನೀಡಿದರು ಎಂಬ ಚರ್ಚೆ ನಡೆಯುತ್ತಿದೆ.

ಮತದಾನ ಕೇಂದ್ರದ 100 ಮೀಟರ್ ವ್ಯಾಪ್ತಿಯೊಳಗೆ ಮತಗಟ್ಟೆ ಅಧಿಕಾರಿಯನ್ನು ಹೊರತು ಪಡಿಸಿ ಮತದಾರರು ಸೇರಿದಂತೆ ಉಳಿದ ಯಾರಿಗೂ ಮೊಬೈಲ್ ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಇದು ಈ ಆದೇಶದ ಸ್ಪಷ್ಟ ಉಲ್ಲಂಘನೆ ಯಾಗಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರಿಂದ ಒತ್ತಾಯ ಗಳು ಕೇಳಿಬರುತ್ತಿವೆ.

ಈ ಬಗ್ಗೆ ವಾರ್ತಾಭಾರತಿ ಜೊತೆ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್, ಇದು ಹಳೆ ವಿಡಿಯೋ ಅಥವಾ ಹೊಸ ವಿಡಿಯೋ ಆಗಿದೆಯೇ ಎಂಬುದನ್ನು ಪರಿಶೀಲನೆ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಈ ವಿಡಿಯೋದ ಸತ್ಯಾಸತ್ಯೆಯನ್ನು ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳ ಲಾಗುವುದು ಎಂದು ತಿಳಿಸಿದರು.

Similar News