ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿ

Update: 2023-05-14 16:08 GMT

ಹೊಸದಿಲ್ಲಿ, ಮೇ 14: ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಯ ಪರಿಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ. 

ಭಾರತೀಯ ನೌಕಾ ಪಡೆಯ ಸ್ವದೇಶಿ ನಿರ್ಮಿತ ಕ್ಷಿಪಣಿ ನಾಶಕ ಯುದ್ಧನೌಕೆ ಐಎನ್‌ಎಸ್ ಮರ್ಮುಗಾವೊ ಮೂಲಕ ಈ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದ್ದು,  ಅದು ನಿಗದಿತ ಸಮಯದಲ್ಲಿ ನಿಖರ ಗುರಿಯನ್ನು ತಲಪುವುದರಲ್ಲಿ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದ್ದಾರೆ. 

ಇದು ರಕ್ಷಣಾ ಕ್ಷೇತ್ರದಲ್ಲಿ  ದೇಶ ಆತ್ಮ ನಿರ್ಭರತೆ ಸಾಧಿಸುತ್ತಿರುವುದರ ದ್ಯೋತಕವಾಗಿದೆ. ನೌಕಾ ಪಡೆಯ ಶಕ್ತಿಯನ್ನೂ ಅನಾವರಣಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ. 

ನೌಕಾ ಪಡೆ ಈ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಾವ ಸ್ಥಳದಿಂದ ನಡೆಸಿದೆ ಎಂದು ಗೊತ್ತಾಗಿಲ್ಲ. 
ಭಾರತ ಹಾಗೂ ರಶ್ಯಾ ಜಂಟಿ ಸಹಭಾಗಿತ್ವದಲ್ಲಿ ಬ್ರಹ್ಮೋಸ್ ಏರೋಸ್ಪೇಸ್  ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಈ ಸೂಪರ್ ಸಾನಿಕ್ ಕ್ಷಿಪಣಿ ಶಬ್ದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.

ಇವುಗಳನ್ನು ಸಬ್‌ಮೆರಿನ್, ಹಡಗು, ವಿಮಾನ ಹಾಗೂ ನೆಲದ ಮೇಲಿನ ವೇದಿಕೆಯಿಂದ ಉಡಾವಣೆ ಮಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. 

Similar News