ಈಗ ವಿರೋಧ ಪಕ್ಷಗಳು ಸಂಘಟಿತವಾಗದಿದ್ದರೆ ದೇಶದ ಜನತೆ ಕ್ಷಮಿಸಲಾರರು: ಅಧೀರ್ ರಂಜನ್ ಚೌಧುರಿ

Update: 2023-05-14 17:48 GMT

ಹೊಸದಿಲ್ಲಿ, ಮೇ 14:  ಒಂದು ವೇಳೆ ಈಗ ವಿರೋಧ ಪಕ್ಷಗಳು ಸಂಘಟಿತವಾಗದೇ ಇದ್ದರೆ, ದೇಶದ ಜನರು ಎಂದಿಗೂ ಕ್ಷಮಿಸಲಾರರು ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ರವಿವಾರ ಹೇಳಿದ್ದಾರೆ.

ಕರ್ನಾಟಕ ವಿಧಾನ ಸಭೆ ಚುನಾವಣೆ ಫಲಿತಾಂಶ ಘೋಷಣೆಯಾದ ಬಳಿಕ ಅಧೀರ್ ರಂಜನ್ ಚೌಧುರಿ ಅವರು ವಿರೋಧ ಪಕ್ಷಗಳು ಸಂಘಟಿತವಾಗುವಂತೆ ಆಗ್ರಹಿಸಿದ್ದಾರೆ.
 
ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ‘‘ವಿರೋಧ ಪಕ್ಷಗಳು ಒಂದಾದರೆ, ಬಿಜೆಪಿ ಅಧಿಕಾರದಲ್ಲಿ ಇರುವುದಿಲ್ಲ ಎಂದು ನಾವು ಮೊದಲಿನಿಂದಲೂ  ಹೇಳಿಕೊಂಡು ಬಂದಿದ್ದೇವೆ. ಕರ್ನಾಟಕ ಚುನಾವಣೆ ಬಳಿಕ ದೇಶಾದ್ಯಂತ ಒಂದು ಅಲೆ ಆರಂಭವಾಗಿದೆ. ಪ್ರಧಾನಿ ಮೋದಿ ಹಾಗೂ ಬಿಜೆಪಿಯ ದಿನಗಳು ಮುಗಿಯುತ್ತಿವೆ ಎಂದು ಜನರು ಹೇಳುತ್ತಿದ್ದಾರೆ’’ ಎಂದು ಅವರು ಹೇಳಿದರು. 

ಸಾರ್ವಜನಿಕರ ಮತ ಫಿಕ್ಸೆಡ್ ಡೆಪಾಸಿಟ್‌ನಂತೆ ಯಾವಾಗಲೂ ಒಂದೇ ಪಕ್ಷಕ್ಕೆ  ಸ್ಥಿರವಾಗಿರುವುದಿಲ್ಲ. ಅದು ಕಾಲಕ್ಕನುಗುಣವಾಗಿ ಬದಲಾಗುತ್ತದೆ ಎಂದು ಅವರು ಹೇಳಿದ್ದಾರೆ. 

ಕರ್ನಾಟಕ ವಿಧಾನ ಸಭೆ ಚುನಾವಣೆಯನ್ನು ಇಡೀ ದೇಶ ಸಂಭ್ರಮಿಸುತ್ತಿದೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯನ್ನು ಜನರು ಪ್ರೀತಿಸಿದ್ದಾರೆ. ಕಾಂಗ್ರೆಸ್ ಪಕ್ಷ ಸತ್ಯದ ದ್ಯೋತಕ ಎಂದು ಅವರು ಹೇಳಿದರು.

Similar News