2024ರಲ್ಲಿ ಬಿಜೆಪಿ ಕನಿಷ್ಠ 25 ಸಂಸದರನ್ನು ತಮಿಳುನಾಡಿನಿಂದ ಲೋಕಸಭೆಗೆ ಕಳುಹಿಸಲಿದೆ: ಅಣ್ಣಾಮಲೈ

Update: 2023-05-20 12:11 GMT

ಚೆನ್ನೈ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 25 ಸಂಸದರನ್ನು ರಾಜ್ಯದಿಂದ ಲೋಕಸಭೆಗೆ ಕಳುಹಿಸಲಿದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಹೇಳಿಕೊಂಡಿದ್ದಾರೆ.

ಕೊಯಂಬತ್ತೂರಿನಲ್ಲಿ ನಡೆದ ಪಕ್ಷದ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಅವರು ಶುಕ್ರವಾರ ಮಾತನಾಡುತ್ತಿದ್ದರು. ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಮಿತ್ರ ಪಕ್ಷ ಎಐಎಡಿಎಂಕೆಗಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದ ಅಣ್ಣಾಮಲೈ, ಬಿಜೆಪಿ ಹಾಗೂ ಮಿತ್ರಪಕ್ಷಗಳು ಎಲ್ಲಾ 39 ಲೋಕಸಭಾ ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಹೇಳಿಕೊಂಡರು.

ಪ್ರಧಾನಿ ನರೇಂದ್ರ ಮೋದಿ  ಅವರಿಗೆ ತಮಿಳುನಾಡಿನ ಮೇಲೆ ಅಪಾರ ಪ್ರೀತಿಯಿದೆ ಎಂದು ಹೇಳಿದ ಅಣ್ಣಾಮಲೈ, ಅವರು ಜಾರಿಗೊಳಿಸುವ ಯೋಜನೆಗಳು ತಮಿಳುನಾಡಿನ ಜನರ ಅಗತ್ಯತೆಗಳನ್ನು ಗಮನದಲ್ಲಿರಿಸಿ ತಯಾರಿಸಲಾಗಿದೆ ಎಂದರು. ಪ್ರಧಾನಿಯಾಗಿ ಅವರು 10 ವರ್ಷ ಪೂರೈಸುತ್ತಿದ್ದಾರೆ, ಮುಂದಿನ ಐದು ವರ್ಷ ಕೂಡ ಅವರೇ ಪ್ರಧಾನಿಯಾಗಬೇಕು ಎಂದು ಅಣ್ಣಾಮಲೈ ಹೇಳಿದರು.

ಪಕ್ಷದ ಗೆಲುವಿಗೆ ಶಕ್ತಿಮೀರಿ ಶ್ರಮಿಸುವಂತೆ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಹಿರಿಯ ಬಿಜೆಪಿ ನಾಯಕರಾದ ಎಚ್‌ ರಾಜಾ, ಪೊನ್‌ ರಾಧಾಕೃಷ್ಣನ್‌ ಮುಂತಾದ ನಾಯಕರು ಉಪಸ್ಥಿತರಿದ್ದರು.

Similar News