ನಾಲ್ಕು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ: ಮೇ 24ರಂದು ಕಾಂಗ್ರೆಸ್ ನಿಂದ ನಿರ್ಣಾಯಕ ಸಭೆ

Update: 2023-05-21 16:19 GMT

ಹೊಸದಿಲ್ಲಿ,ಮೇ 21: ಕರ್ನಾಟಕದಲ್ಲಿ ಭರ್ಜರಿ ಗೆಲುವಿನ ಬಳಿಕ ಕಾಂಗ್ರೆಸ್ ನಾಯಕತ್ವವು ಮುಂದಿನ ಸುತ್ತಿನ ಚುನಾವಣೆಗಳ ಕುರಿತು ಗಮನ ಹರಿಸಿದ್ದು,ಈ ಪೈಕಿ ಕೆಲವು ರಾಜ್ಯಗಳಲ್ಲಿ ಅದು ಬಿಜೆಪಿಯೊಂದಿಗೆ ನೇರ ಸ್ಪರ್ಧೆಯಲ್ಲಿದೆ.

ಮುಂದಿನ ಕೆಲವು ತಿಂಗಳುಗಳಲ್ಲಿ ಮಧ್ಯಪ್ರದೇಶ,ರಾಜಸ್ಥಾನ,ಛತ್ತೀಸ್ಗಡ,ತೆಲಂಗಾಣ ಮತ್ತು ಮಿಝೋರಮ್ಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು,ಕಾಂಗ್ರೆಸ್ ಈ ರಾಜ್ಯಗಳಲ್ಲಿ ತನ್ನ ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಸಂಬಂಧ ಮೇ 24ರಂದು ಈ ರಾಜ್ಯಗಳ ನಾಯಕರ ಸಭೆಯನ್ನು ಕರೆದಿದ್ದಾರೆ.

ರಾಜಸ್ಥಾನ ಮತ್ತು ಛತ್ತೀಸ್ಗಡದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್,ಕರ್ನಾಟಕ ಕಾರ್ಯತಂತ್ರವನ್ನು ಪುನರಾವರ್ತಿಸುವ ಮೂಲಕ ಆಡಳಿತ ವಿರೋಧಿ ಅಂಶ ಮತ್ತು ಪಕ್ಷದಲ್ಲಿನ ಆಂತರಿಕ ಕಚ್ಚಾಟವನ್ನು ನಿವಾರಿಸುವ ಆಶಯವನ್ನು ಹೊಂದಿದೆ. ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಮರಳಲೂ ಅದು ದೃಢಸಂಕಲ್ಪ ಮಾಡಿದೆ. ಜ್ಯೋತಿರಾದಿತ್ಯ ಸಿಂದಿಯಾ ಮತ್ತು ಕೆಲವು ಶಾಸಕರು ನಿಷ್ಠೆಯನ್ನು ಬದಲಿಸಿದ್ದರಿಂದ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರವನ್ನು ಕಳೆದುಕೊಂಡಿತ್ತು.

ಮೇ 24ರಂದು ಖರ್ಗೆಯವರು ರಾಜ್ಯ ನಾಯಕರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಲಿದ್ದಾರೆ ಎಂದು ತಿಳಿಸಿದ ಪಕ್ಷದ ಮೂಲಗಳು,ತಳಮಟ್ಟದವರೆಗೆ ತಲುಪಲು ಆರಂಭಿಕ ಕಾರ್ಯತಂತ್ರವನ್ನು ರೂಪಿಸಲು ಕಾಂಗ್ರೆಸ್ ಉದ್ದೇಶಿಸಿದೆ ಎಂದು ಹೇಳಿದವು.

ತೆಲಂಗಾಣ,ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಂತಹ ರಾಜ್ಯಗಳ ಮೂಲಕ ಸಾಗಿದ ಭಾರತ ಜೋಡೊ ಯಾತ್ರೆಯು ಈಗಾಗಲೇ ಕಾರ್ಯಕರ್ತರನ್ನು ಸಕ್ರಿಯಗೊಳಿಸಿರುವುದರಿಂದ ಅದು ಕರ್ನಾಟಕದಂತೆ ಈ ರಾಜ್ಯಗಳಲ್ಲಿಯೂ ಪಕ್ಷಕ್ಕೆ ಲಾಭವನ್ನು ತರಲಿದೆ ಎಂದು ಹಿರಿಯ ನಾಯಕರೋರ್ವರು ತಿಳಿಸಿದರು.

ಈ ಐದು ರಾಜ್ಯಗಳ ಪೈಕಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ವಿಶೇಷವಾಗಿ ಆಂತರಿಕ ಕಚ್ಚಾಟ ಮತ್ತು ಬಣಗಾರಿಕೆಯಿಂದಾಗಿ ಸವಾಲುಗಳನ್ನು ಎದುರಿಸುತ್ತಿದೆ.

ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹಾಗೂ ಅತ್ತ ಛತ್ತೀಸ್ಗಡದಲ್ಲಿ ಮುಖ್ಯಮಂತ್ರಿ ಭೂಪೇಶ ಬಾೆಲ್ ಮತ್ತು ಸಚಿವ ಟಿ.ಎಸ್.ಸಿಂಗ್ದೇವ್ ನಡುವೆ ಬಹಿರಂಗ ಕಲಹವೇರ್ಪಟ್ಟಿದ್ದರೆ,ತೆಲಂಗಾಣದಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರೇವಂತ ರೆಡ್ಡಿಯವರು ತನ್ನನ್ನು ಹೊರಗಿನ ವ್ಯಕ್ತಿ ಎಂದು ಪರಿಗಣಿಸಿರುವ ರಾಜ್ಯನಾಯಕರಿಂದ ಸವಾಲುಗಳನ್ನು ಎದುರಿಸುತ್ತಿದ್ದಾರೆ.

Similar News