ರಶ್ಯದ ದೇಶಭ್ರಷ್ಟರಿಗೆ ಜರ್ಮನಿಯಲ್ಲಿ ವಿಷಪ್ರಾಶನ ಶಂಕೆ: ವರದಿ‌

Update: 2023-05-21 16:45 GMT

ಜರ್ಮನಿ, ಮೇ 21: ರಶ್ಯದಿಂದ ದೇಶಭ್ರಷ್ಟರಾಗಿ ಜರ್ಮನಿಯಲ್ಲಿ ವಾಸಿಸುತ್ತಿರುವ ರಶ್ಯದ ಪ್ರಜೆಗಳಿಗೆ ವಿಷಪ್ರಾಶನ ನಡೆಸಲಾಗಿದೆ ಎಂಬ ವರದಿಯ ಬಗ್ಗೆ ಜರ್ಮನಿ ಪೊಲೀಸರು  ತನಿಖೆ ನಡೆಸುತ್ತಿದ್ದಾರೆ  ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಕಳೆದ ವಾರ ರಶ್ಯದ ಭಿನ್ನಮತೀಯರು ಬರ್ಲಿನ್ ನಲ್ಲಿ ನಡೆಸಿದ ಸಭೆಯಲ್ಲಿ ಪಾಲ್ಗೊಂಡಿದ್ದ ಓರ್ವ ಪತ್ರಕರ್ತ ಮತ್ತು  ಸಾಮಾಜಿಕ ಕಾರ್ಯಕರ್ತರಿಗೆ ತೀವ್ರ ಆರೋಗ್ಯ ಸಮಸ್ಯೆ ಕಾಡಿತ್ತು. ಈ ಹಿಂದೆ ರಶ್ಯ ಅಧ್ಯಕ್ಷ ಪುಟಿನ್ ಪರಮಾಪ್ತರಾಗಿದ್ದು ಬಳಿಕ ವಿರೋಧಿಗಳ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ರಶ್ಯದ ಉದ್ಯಮಿ ಮಿಖಾಯಿಲ್ ಖೊಡೊರ್ಕೊವ್ಸ್ಕಿ ಈ ಸಭೆಯನ್ನು ಆಯೋಜಿಸಿದ್ದರು. ಸಭೆಯ ಬಳಿಕ ಪತ್ರಕರ್ತರಿಗೆ ತೀವ್ರ ಅನಾರೋಗ್ಯ ಕಾಡಿದಾಗ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ವಿಷಪ್ರಾಶನದ ಸಾಧ್ಯತೆಯಿರುವುದಾಗಿ ವೈದ್ಯರು ಹೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತೆ, ಅಮೆರಿಕದಲ್ಲಿ ಕಾರ್ಯಾಚರಿಸುತ್ತಿರುವ  `ಫ್ರೀ ರಶ್ಯ ಫೌಂಡೇಷನ್' ಎಂಬ ಎನ್ಜಿಒ ಸಂಸ್ಥೆಯ ನಿರ್ದೇಶಕಿ ನತಾಲಿಯಾ ಆರ್ನೊ ಎಂಬವರಿಗೂ ಇದೇ ಸಮಸ್ಯೆ ಕಾಡಿದೆ. ಇವರು ಬರ್ಲಿನ್ ಸಭೆಯಲ್ಲಿ ಹಾಜರಾಗಿ ಹೋಟೆಲ್ನ ತಮ್ಮ ಕೋಣೆಗೆ ತೆರಳಿದಾಗ ಕೋಣೆಯ ಬಾಗಿಲು ತೆರೆದಿತ್ತು ಎಂದು ವರದಿ ಹೇಳಿದೆ.

ರಶ್ಯದಿಂದ ದೇಶಭ್ರಷ್ಟರಾದವರಿಗೆ ವಿದೇಶದಲ್ಲಿ ವಿಷಪ್ರಾಶನ ನಡೆಸುವ ಹಲವು ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿವೆ ಎಂದು ಜರ್ಮನ್ ಪೊಲೀಸರು ಹೇಳಿದ್ದಾರೆ. 

Similar News