ಯುಪಿಎಸ್ ಸಿ ಫಲಿತಾಂಶ ಪ್ರಕಟ: ನಂ.1 ರ‍್ಯಾಂಕ್ ಪಡೆದ ಇಶಿತಾ ಕಿಶೋರ್

Update: 2023-05-23 17:00 GMT

ಹೊಸದಿಲ್ಲಿ, ಮೇ 23:  ಕೇಂದ್ರ ಲೋಕಸೇವಾ ಆಯೋಗ 2022ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದ್ದು, ಇಶಿತಾ ಕಿಶೋರ್ ಪ್ರಥಮ ಸ್ಥಾನ ಪಡೆದಿದ್ದಾರೆ. 

ಈ ಪರೀಕ್ಷೆಯಲ್ಲಿ ಗರಿಮಾ ಲೋಹಿಯಾ 2ನೇ ರ್ಯಾಂಕ್, ಉಮಾ ಹರಿತಿ ಎನ್. 3ನೇ ರ್ಯಾಂಕ್, ಸ್ಮತಿ ಮಿಶ್ರಾ 4ನೇ ರ್ಯಾಂಕ್ ಪಡೆದಿದ್ದಾರೆ. ಮೊದಲ ನಾಲ್ವರು ಟಾಪರ್‌ಗಳು ಮಹಿಳೆಯರು. 

ನಾಗರಿಕ ಸೇವಾ ಪರೀಕ್ಷೆಯಲ್ಲಿ 933 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಇವರಲ್ಲಿ 613 ಪುರುಷರು ಹಾಗೂ 320 ಮಹಿಳೆಯರು ಎಂದು ಯುಪಿಎಸ್‌ಸಿ ತಿಳಿಸಿದೆ. 
ನಾಗರಿಕ ಸೇವಾ ಪರೀಕ್ಷೆಯನ್ನು ಪ್ರತಿ ವರ್ಷ ಮೂರು ಹಂತಗಳಲ್ಲಿ ನಡೆಸಲಾಗುತ್ತದೆ. ಪೂರ್ವಭಾವಿ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ. ಈ ಮೂಲಕ ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) ಹಾಗೂ ಭಾರತೀಯ ಪೊಲೀಸ್ ಸೇವೆ (ಐಪಿಎಸ್)ಗೆ ಅಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. 
 

Similar News