ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಬಿಜೆಪಿ ಸಂಸದನಿಂದ ಅಯೋಧ್ಯೆಯಲ್ಲಿ ಬೃಹತ್ ರ‍್ಯಾಲಿಗೆ ಸಿದ್ಧತೆ

Update: 2023-05-23 17:08 GMT

ಹೊಸದಿಲ್ಲಿ: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿಯ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಪರವಾಗಿ ರ‍್ಯಾಲಿ ನಡೆಸಿ, ಶಕ್ತಿ ಪ್ರದರ್ಶನ ನಡೆಸಲು ಅಯೋಧ್ಯೆಯಲ್ಲಿ ಸಿದ್ಧತೆ ನಡೆಸಲಾಗಿದೆ.

ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥರಾಗಿರುವ ಬ್ರಿಜ್ ಭೂಷಣ್ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವ ವೇಳೆಯಲ್ಲಿಯೇ ಆರೋಪಿ ಪರವಾಗಿ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದಾರೆ.  ಜೂನ್ 5ರಂದು ಅಯೋಧ್ಯೆಯಲ್ಲಿ ರ‍್ಯಾಲಿ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಲು ಸಿದ್ಧತೆ ನಡೆದಿದೆ. 

 ಅಯೋಧ್ಯೆಯ ರಾಮ್ ಕಥಾ ಪಾರ್ಕ್‌ನಲ್ಲಿ ನಡೆಯಲಿರುವ ಜನ ಚೇತನ ಮಹಾ ರ್ಯಾಲಿಯನ್ನು ಉದ್ದೇಶಿಸಿ ಬ್ರಿಜ್ ಭೂಷಣ್ ಅವರು ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳಿಂದ ಸಾಧುಗಳು, ಕಾನೂನು ತಜ್ಞರು ಹಾಗೂ ಶಿಕ್ಷಣ ತಜ್ಞರನ್ನು ಆಹ್ವಾನಿಸಲಾಗಿದೆ. 

ಪ್ರಕರಣ ಸಂಬಂಧ ದಿಲ್ಲಿ ಪೊಲೀಸರು ಈಗಾಗಲೇ  ಎರಡು ಎಫ್‌ಐಆರ್‌ಗಳನ್ನು ಸಂಸದರ ವಿರುದ್ಧ ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಾದಾಗಿನಿಂದ ಬ್ರಿಜ್ ಭೂಷಣ್ ರಾಜಕೀಯ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು. ಇದೀಗ ಅಯೋಧ್ಯೆಯಲ್ಲಿ ಬೃಹತ್ ಮೆರವಣಿಗೆಯನ್ನು ಆಯೋಜಿಸಲಾಗಿದ್ದು,  ರ್ಯಾಲಿಗೆ ಜನರನ್ನು ಆಹ್ವಾನಿಸಲು ಉತ್ತರ ಪ್ರದೇಶದ ಅವಧ್ ಭಾಗದಲ್ಲಿರುವ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಅದಾಗ್ಯೂ, ಅಯೋಧ್ಯೆ ಬಿಜೆಪಿ ಘಟಕವು ಈ ರ‍್ಯಾಲಿಯಿಂದ ದೂರ ಸರಿದಿದೆ ಎಂದು ವರದಿಯಾಗಿದೆ.

”ಬಿಜೆಪಿಗೂ ಈ ರ್ಯಾಲಿಗೂ ಸಂಬಂಧವಿಲ್ಲ. ನಾಯಕರು ನಮ್ಮನ್ನು ಕೇಳಿದರೆ ಮಾತ್ರ ನಾವು ಭಾಗವಹಿಸುತ್ತೇವೆ. ಇಲ್ಲಿಯವರೆಗೆ ನಮಗೆ ಅಂತಹ ಯಾವುದೇ ನಿರ್ದೇಶನ ಬಂದಿಲ್ಲ" ಎಂದು ಬಿಜೆಪಿಯ ಅಯೋಧ್ಯೆ ಜಿಲ್ಲಾಧ್ಯಕ್ಷ ಸಂಜೀವ್ ಸಿಂಗ್ ಹೇಳಿದ್ದಾರೆ.

Similar News