ಉತ್ತರ ಪ್ರದೇಶದಲ್ಲಿ ಪ್ರತಿ 15 ದಿನಕ್ಕೊಂದು ಎನ್‌ಕೌಂಟರ್‌: ತನಿಖಾ ವರದಿಯಿಂದ ಬಹಿರಂಗ

ಆದಿತ್ಯನಾಥ್‌ ಆಡಳಿತದಲ್ಲಿ ಇಲ್ಲಿಯ ತನಕ 186 ಎನ್‌ಕೌಂಟರ್‌ಗಳು

Update: 2023-05-25 11:08 GMT

ಲಕ್ನೋ: ಅಪರಾಧಿಗಳನ್ನು ಮಟ್ಟಹಾಕುವಲ್ಲಿ ತಮ್ಮ ಸರಕಾರ ಎತ್ತಿದ ಕೈ ಎಂದು ಉತ್ತರ ಪ್ರದೇಶದ ಆದಿತ್ಯನಾಥ್‌ ಸರ್ಕಾರ ತನ್ನ ಬೆನ್ನನ್ನು ಸದಾ ತಟ್ಟಿಕೊಳ್ಳುತ್ತದೆ. ಅದೇ ಸಮಯ ರಾಜ್ಯದಲ್ಲಿ ನಡೆಯುವ ಪೊಲೀಸ್‌ ಎನ್‌ಕೌಂಟರ್‌ಗಳು ಹಾಗೂ ಕ್ರಿಮಿನಲ್‌ಗಳೆಂದು ಆರೋಪಿಸಲಾದವರ ಕಟ್ಟಡಗಳ ಮೇಲೆ ಬುಲ್‌ಡೋಜರ್‌ ಹಾಯಿಸುವ ಘಟನೆಗಳೂ ಸುದ್ದಿಯಾಗುತ್ತಿದೆ.

'ದಿ ಇಂಡಿಯನ್‌ ಎಕ್ಸ್‌ ಪ್ರೆಸ್‌' ಪತ್ರಿಕೆಯು ಪೊಲೀಸ್‌ ದಾಖಲೆಗಳನ್ನು ತನಿಖೆ ನಡೆಸಿ ಕೆಲವೊಂದು ಕುತೂಹಲಕಾರಿ ಮಾಹಿತಿಯನ್ನು ಹೊರಗೆಡಹಿದೆ. ಮಾರ್ಚ್‌ 2017ರಿಂದೀಚೆಗೆ, ಅಂದರೆ ಆದಿತ್ಯನಾಥ್‌ ಅಧಿಕಾರವಹಿಸಿದಾಗಿನಿಂದ ಇಲ್ಲಿಯ ತನಕ ರಾಜ್ಯದಲ್ಲಿ 186 ಎನ್‌ಕೌಂಟರ್‌ಗಳು ನಡೆದಿವೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಇದನ್ನು ಪರಿಗಣಿಸಿದರೆ ರಾಜ್ಯದಲ್ಲಿ 2017ರಿಂದೀಚೆಗೆ ಪ್ರತಿ 15 ದಿನಗಳ ಅವಧಿಯಲ್ಲಿ ಒಬ್ಬ ಶಂಕಿತ ಅಪರಾಧಿಯ ಹತ್ಯೆ ನಡೆದಿದೆ.

ಅಪರಾಧಿಗಳೆಂದು ತಿಳಿಯಲಾದವರ ಮೇಲೆ ನಡೆದ ಪೊಲೀಸ್‌ ಫೈರಿಂಗ್‌ನಲ್ಲಿ (ಸಾಮಾನ್ಯವಾಗಿ ಕಾಲಿಗೆ ಗುಂಡು ಹೊಡೆಯುವುದು) ಪರಿಗಣಿಸಿದರೆ ಇಂತಹ ಘಟನೆಗಳ ಸಂಖ್ಯೆ 5,046 ಆಗಿದೆ. ಅಂದರೆ ಪ್ರತಿ 15 ದಿನಗಳ ಅವಧಿಯಲ್ಲಿ 30ಕ್ಕೂ ಅಧಿಕ ಅಪರಾಧಿಗಳನ್ನು ಗುರಿಯಾಗಿಸಲಾಗಿದೆ.

ಪೊಲೀಸ್‌ ಎನ್‌ಕೌಂಟರ್‌ಗಳಲ್ಲಿ ಸತ್ತ 186 ಮಂದಿಯ ಪೈಕಿ 96 ಮಂದಿ ಕೊಲೆ ಪ್ರಕರಣಗಳು, ಇಬ್ಬರು ಲೈಂಗಿಕ ಕಿರುಕುಳ, ಸಾಮೂಹಿಕ ಅತ್ಯಾಚಾರ ಮತ್ತು ಪೊಕ್ಸೋ ಪ್ರಕರಣ ಎದುರಿಸುತ್ತಿದ್ದರೆಂದು ತಿಳಿದು ಬಂದಿದೆ.

ದಾಖಲೆಗಳಿಂದ ಕಂಡುಕೊಂಡಂತೆ ಹೆಚ್ಚಿನ ಎನ್‌ಕೌಂಟರ್‌ ಸಾವುಗಳನ್ನು ಕಾನೂನಾತ್ಮಕವಾಗಿ ಪ್ರಶ್ನಿಸಲಾಗಿಲ್ಲ, ನಿಯಮಾನುಸಾರ ಸಾವಿಗೆ ಕಾರಣವಾಗುವ ಪೊಲೀಸ್‌ ಎನ್‌ಕೌಂಟರ್‌ ಪ್ರಕರಣಗಳಲ್ಲಿ ಮೆಜಿಸ್ಟೀರಿಯಲ್‌ ತನಿಖೆ ನಡೆಸಬೇಕಿದೆ. ಇಲ್ಲಿ 161 ಪ್ರಕರಣಗಳ ತನಿಖೆ ನಡೆಸಿ ಯಾವುದೇ ಆಕ್ಷೇಪಣೆಯಿಲ್ಲದೆ ವಿಲೇವಾರಿಗೊಳಿಸಲಾಗಿದೆ ಎಂದು ದಾಖಲೆಗಳು ತಿಳಿಸುತ್ತವೆ.

ಎನ್‌ಕೌಂಟರ್‌ ಪ್ರಕರಣಗಳಲ್ಲಿ ಮೂರನೇ ಒಂದರಷ್ಟು ಅಥವಾ 65 ಪ್ರಕರಣಗಳು ಮೀರತ್‌ ವಲಯದಲ್ಲಿ ನಡೆದಿದ್ದರೆ, 20 ಪ್ರಕರಣಗಳು ವಾರಣಾಸಿ ಹಾಗೂ 14 ಪ್ರಕರಣಗಳು ಆಗ್ರಾ ವಲಯದಲ್ಲಿ ನಡೆದಿವೆ.

ಮಾರ್ಚ್‌ 2017 ರಿಂದ ಎಪ್ರಿಲ್‌ 2023ರ ಅವಧಿಯಲ್ಲಿ  ಅಪರಾಧಿಗಳ ಜೊತೆಗಿನ ಗುಂಡಿನ ಚಕಮಕಿಗಳಲ್ಲಿ 13 ಪೊಲೀಸರ ಹತ್ಯೆಯಾಗಿದ್ದರೆ 1443 ಮಂದಿ ಗಾಯಗೊಂಡಿದ್ದಾರೆ.  ಎಲ್ಲಾ ಮೃತ 13 ಪೊಲೀಸರು ಹಾಗೂ 405 ಮಂದಿ ಗಾಯಾಳುಗಳು ಮೀರತ್‌ ವಲಯದವರೆಂದು ತಿಳಿದು ಬಂದಿದೆ.

Similar News