ಮಂಗಳೂರು: ‘ಸಿಇಐಆರ್ ಪೋರ್ಟಲ್’ ಮೂಲಕ ಪತ್ತೆಯಾದ ಮೊಬೈಲ್‌ಗಳ ಹಸ್ತಾಂತರ

Update: 2023-06-03 14:17 GMT

ಮಂಗಳೂರು: ಆಕಸ್ಮಿಕವಾಗಿ ಕಳೆದುಹೋದ ಅಥವಾ ಕಳವಾದ ಮೊಬೈಲ್‌ಗಳನ್ನು ಪತ್ತೆ ಮಾಡಲು ಕೇಂದ್ರ ಸರಕಾರ ಜಾರಿಗೆ ತಂದಿರುವ ‘ಸಿಇಐಆರ್ ಪೋರ್ಟಲ್’ ಮೂಲಕ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿ ಯಲ್ಲಿ ಈವರೆಗೆ ಪತ್ತೆ ಮಾಡಲಾದ 524 ಮೊಬೈಲ್ ಪೋನ್‌ಗಳ ಪೈಕಿ 93 ಮೊಬೈಲ್‌ಗಳನ್ನು ಕಮಿಷನರ್ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ವಾರಸುದಾರರಿಗೆ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಅವರು ‘ಸಿಇಐಆರ್ ಪೋರ್ಟಲ್’ ವ್ಯವಸ್ಥೆಯು 2022ರ ಸೆಪ್ಟಂಬರ್ 5ರಿಂದ ಆರಂಭಗೊಂಡಿದೆ. ನಗರ ವ್ಯಾಪ್ತಿಯಲ್ಲಿ ಈವರೆಗೆ 2,133 ಮೊಬೈಲ್ ಪೋನ್‌ಗಳ ಪತ್ತೆಗೆ ಸಾರ್ವಜನಿಕರಿಂದ ಸಿಇಐಆರ್ ಪೋರ್ಟಲ್ ಮೂಲಕ ಮನವಿ ಬಂದಿತ್ತು. ಅದರಲ್ಲಿ 2,391 ಐಎಂಇಐಗಳು ಬ್ಲಾಕ್ ಮಾಡಲಾಗಿದೆ. 524 ಮೊಬೈಲ್ ಪೋನ್‌ಗಳು ಪತ್ತೆಯಾಗಿವೆ. ಈಗಾಗಲೇ 240 ಮೊಬೈಲ್ ಪೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ 147 ಮೊಬೈಲ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಇದೀಗ ಮತ್ತೆ 93 ಮೊಬೈಲ್‌ಗಳನ್ನು ಹಸ್ತಾಂತರಿಸಲಾಗುತ್ತಿದೆ ಎಂದರು.

ಮೊಬೈಲ್ ಕಳೆದು ಹೋದಾಗ ಸಮೀಪದ ಪೊಲೀಸ್ ಠಾಣೆಯಲ್ಲಿ ಅಥವಾ ಕೆಎಸ್‌ಪಿ ಆ್ಯಪ್‌ನಲ್ಲಿ ದೂರು ದಾಖಲಿಸಿ www.ceir.gov.in ನಲ್ಲಿ ಮೊಬೈಲ್‌ನ ವಿವರ ಹಾಗೂ ದೂರಿನ ವಿವರಗಳನ್ನು ನಮೂದಿಸಿ ಸ್ವತಃ ಅರ್ಜಿದಾರರೆ ಐಎಂಇಐ ಬ್ಲಾಕ್‌ಗೆ ಕೋರಿಕೆ ಸಲ್ಲಿಸಬಹುದು ಅಥವಾ ಸ್ಥಳೀಯ ಪೊಲೀಸರು ಕೂಡ ಪೋರ್ಟಲ್ ಮೂಲಕ ವಿವರ ನಮೂದಿಸುತ್ತಾರೆ.

ಈ ಪೋರ್ಟಲ್‌ನ ಬಳಕೆ ಸಾರ್ವಜನಿಕರಿಗೆ ಸುಲಭವಾಗಬೇಕೆಂಬ ಉದ್ದೇಶದಿಂದ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ‘ಚಾಟ್ ಬಾಟ್’ ವ್ಯವಸ್ಥೆ ಜಾರಿಗೆ ತರಲಾಗಿದೆ. 8277949183 ಸಂಖ್ಯೆಗೆ ಏಜಿ ಮೆಸೇಜ್ ಕಳುಹಿಸಿದರೆ ಪೊಲೀಸರಿಂದ ಒಂದು ಲಿಂಕ್ ಬರುತ್ತದೆ. ಅದರ ಮೂಲಕವೂ ಈ ಮಾಹಿತಿಯನ್ನು ದಾಖಲಿಸಬಹುದು. ‘ಚಾಟ್ ಬಾಟ್’ ಜಾರಿಗೊಂಡ ಅನಂತರ ಸಿಇಐಆರ್ ಪೋರ್ಟಲ್ ಮೂಲಕ ಹೆಚ್ಚಿನ ಕೋರಿಕೆ ಗಳು ದಾಖಲಾಗುತ್ತಿವೆ ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದರು.

ಸೈಬರ್ ವಂಚನೆ ಬಳಕೆಗೆ ತಡೆ

ಸೈಬರ್ ವಂಚಕರು ಬಳಸುವ ಮೊಬೈಲ್ ಪೋನ್‌ಗಳ ಐಎಂಇಐನ್ನು ಕೂಡ ಸಿಇಐಆರ್ ಮೂಲಕ ಬ್ಲಾಕ್ ಮಾಡಲಾಗುತ್ತಿದೆ. ಇದರಿಂದ ಸೈಬರ್ ವಂಚಕರು ಅದೇ ಸಂಖ್ಯೆಯನ್ನು ಮತ್ತೆ ಬಳಕೆ ಮಾಡುವುದನ್ನು ತಡೆಯಬಹುದಾಗಿದೆ. ಸಾರ್ವಜನಿಕರಿಗೆ ಮತ್ತು ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ಈವರೆಗೆ 5,892 ಐಎಂಇಐಗಳ ಬ್ಲಾಕ್‌ಗೆ ಸಿಇಐಆರ್ ಮೂಲಕ ಕೋರಿಕೆ ಸಲ್ಲಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

ಮೊಬೈಲ್ ಮರಳಿ ಪಡೆದವರಲ್ಲಿ ಸಂತಸ

ಕಳೆದು ಹೋದ ಅಥವಾ ಕಳವಾದ ಮೊಬೈಲ್‌ಗಳನ್ನು ಮರಳಿ ಪಡೆದುಕೊಳ್ಳಲು ಪೊಲೀಸ್ ಆಯುಕ್ತರ ಕಚೇರಿಗೆ ಬಂದಿದ್ದ ವಾರುಸದಾರರ ಮುಖವು ಮಂದಸ್ಮಿತದಿಂದ ಕೂಡಿತ್ತು.  ಒಬ್ಬೊಬ್ಬರು ಒಂದೊಂದು ಕತೆಗಳನ್ನು ಪೊಲೀಸರು, ಸುದ್ದಿಗಾರರ ಜೊತೆ ಹಂಚಿಕೊಳ್ಳತೊಡಗಿದರು.

‘ನನ್ನ ಮೊಬೈಲ್‌ಗೆ ಹೆಚ್ಚೇನು ಇಲ್ಲ, 1 ಸಾವಿರ ರೂಪಾಯಿ ಇದೆಯಷ್ಟೆ. ಆದರೆ ಸಾವಿರಾರು ಸಂಪರ್ಕ ಸಂಖ್ಯೆ ಇದರಲ್ಲಿದೆ. ನಾನು ನಗರದ ಮಣ್ಣಗುಡ್ಡೆಯಲ್ಲಿ ಪಡಿತರ ಚೀಟಿ ಅಂಗಡಿ ನಡೆಸಿಕೊಂಡಿರುವೆ, ಕಳೆದ ಡಿಸೆಂಬರ್‌ನಲ್ಲಿ ಯಾರೋ ಅಂಗಡಿಯ ಬಾಗಿಲು ಮುರಿದು ಮೊಬೈಲ್ ಕಳವು ಮಾಡಿದ್ದರು. ಅಷ್ಟೇ ಅಲ್ಲ, ನನ್ನ ತಂದೆ ಕೊಟ್ಟಿದ್ದ ಹಣವನ್ನೂ ಡ್ರಾವರ್‌ನಲ್ಲಿಟ್ಟಿದ್ದೆ. ಅದನ್ನೂ ಕಳವು ಮಾಡಿದ್ದರು. ಈಗ ಕಳವಾದ ಮೊಬೈಲ್ ಮಾತ್ರ ಸಿಕ್ಕಿದೆ. ತಂದೆ ಕೊಟ್ಟ ಹಣವನ್ನು ತುಂಬಾ ಜತನದಿಂದ ಕಾಪಾಡಿದ್ದೆ. ಅದನ್ನು ಕಳವಾದ ಬೇಸರವಿದೆ. ಮೊಬೈಲ್ ಸಿಕ್ಕಿದ್ದರಿಂದ ತುಂಬಾ ಸಂತೋಷವಾಗಿದೆ ಎಂದು ಸುಕುಮಾರ ಶೆಟ್ಟಿ ತಿಳಿಸಿದರು.

Similar News