ಬಿಹಾರದಲ್ಲಿ ನಿರ್ಮಾಣ ಹಂತದ ಬೃಹತ್ ಚತುಷ್ಪಥ ಸೇತುವೆ ಕುಸಿತ

Update: 2023-06-04 17:45 GMT

ಪಾಟ್ನಾ, ಜೂ.4: ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಚತುಷ್ಪಥ ಸೇತುವೆಯೊಂದು ರವಿವಾರ ಕುಸಿದುಬಿದ್ದಿದೆ. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲವೆಂದು ತಿಳಿದುಬಂದಿದೆ. ಆಗುವಾನಿ-ಸುಲ್ತಾನ್ಗಂಜ್ ನಗರಗಳನ್ನು ಸಂಪರ್ಕಿಸುವ   ಈ ಸೇತುವೆಯನ್ನು  ಗಂಗಾನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿತ್ತು. ಸೇತುವೆಯ ಮೂರು ಸ್ತಂಭಗಳು ರವಿವಾರ ಹಠಾತ್ತನೆ ನದಿಗೆ ಕುಸಿದುಬಿದ್ದಿವೆ. 

ಸೇತುವೆ ಕುಸಿತದ ದೃಶ್ಯಗಳನ್ನು ಸಾರ್ವಜನಿಕರು ಮೊಬೈಲ್ ಫೋನ್ ಗಳಲ್ಲಿ ಸೆರೆಹಿಡಿದಿದ್ದು, ಅವು ಸಾರ್ವಜನಿಕ ಜಾಲತಾಣಗಳಲ್ಲಿ  ವೈರಲ್ ಆಗಿವೆ. ನೂರು ಮೀಟರ್ ಎತ್ತರದಲ್ಲಿ  ನಿರ್ಮಿಸಲಾಗುತ್ತಿರುವ ಈ ಸೇತುವೆಯ ಒಂದು ಭಾಗವು ಸಂಪೂರ್ಣ ನದಿಯಲ್ಲಿ ಮುಳುಗಿದೆ.

ರವಿವಾರ ರಜಾದಿನವಾಗಿದ್ದರಿಂದ  ಸೇತುವೆಯ ನಿರ್ಮಾಣ ಕಾಮಗಾರಿ ನಡೆಯುತ್ತಿರಲಿಲ್ಲ. ಹೀಗಾಗಿ ಕೆಲವೇ ಕಾರ್ಮಿಕರು ಮಾತ್ರ  ಸ್ಥಳದಲ್ಲಿದ್ದರೆಂದು ತಿಳಿದುಬಂದಿದೆ. ಸೇತುವೆಯ ಗುಣಮಟ್ಟದ ಬಗ್ಗೆ ಕಳೆದ ವರ್ಷದ ಏಪ್ರಿಲ್ನಲ್ಲಿ  ಆಕ್ಷೇಪಗಳು ಕೇಳಿಬಂದಿದ್ದವು.
ಸೇತುವೆ ಕುಸಿತದ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತನಿಖೆಗೆ ಆದೇಶಿಸಿದ್ದಾರೆ ಹಾಗೂ ಈ ಅವಘಡಕ್ಕೆ ಹೊಣೆಗಾರರನ್ನು ಗುರುತಿಸುವಂತೆ ಸೂಚಿಸಿದ್ದಾರೆ.

Similar News