ನರೇಗಾ ಕಾರ್ಮಿಕರಿಗೆ ಆಧಾರ್ ಆಧರಿತ ಪಾವತಿ ವ್ಯವಸ್ಥೆ ಅಳವಡಿಕೆಗೆ ರಾಜ್ಯಗಳಿಗೆ ಕೇಂದ್ರದ ಸೂಚನೆ‌

Update: 2023-06-04 18:17 GMT

ಹೊಸದಿಲ್ಲಿ: ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯಡಿ ಕಾರ್ಮಿಕರು ಆಧಾರ್ ಆಧರಿತ ಪಾವತಿ ವ್ಯವಸ್ಥೆ (ಎಬಿಪಿಎಸ್)ಯ ಮೂಲಕ ತಮ್ಮ ವೇತನಗಳನ್ನು ಸ್ವೀಕರಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರವು ಶನಿವಾರ ರಾಜ್ಯ ಸರಕಾರಗಳನ್ನು ಆಗ್ರಹಿಸಿದೆ.

ಫೆ.1ರಂದು ಕೇಂದ್ರವು ಯೋಜನೆಯಡಿ ಎಲ್ಲ ಪಾವತಿಗಳನ್ನು ಎಬಿಪಿಎಸ್ ಮೂಲಕ ಮಾಡುವುದನ್ನು ಕಡ್ಡಾಯಗೊಳಿಸಿತ್ತು. ಅದಕ್ಕೂ ಮುನ್ನ ಕಾರ್ಮಿಕರು ಬ್ಯಾಂಕ್ ಖಾತೆ ಆಧರಿತ ಪಾವತಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು.

ನರೇಗಾ ಕಾರ್ಮಿಕರು, ಸಾಮಾಜಿಕ ಕಾರ್ಯಕರ್ತರು ಮತ್ತು ರಾಜಕಾರಣಿಗಳ ಪ್ರತಿಭಟನೆಗಳ ಬಳಿಕ ಎಪ್ರಿಲ್ ನಲ್ಲಿ ಕೇಂದ್ರವು ಎಬಿಪಿಎಸ್ ಅನ್ನು ಬಳಸಿಕೊಳ್ಳಲು ಗಡುವನ್ನು ಜೂ.30ರವರೆಗೆ ವಿಸ್ತರಿಸಿತ್ತು. ಕೇವಲ ಶೇ.43ರಷ್ಟು ಕಾರ್ಮಿಕರು ಆಧಾರ್ ಆಧರಿತ ಪಾವತಿ ವ್ಯವಸ್ಥೆಗೆ ಅರ್ಹರಾಗಿರುವುದರಿಂದ ನೂತನ ಪದ್ಧತಿಯು ಕಾರ್ಯ ನಿರ್ವಹಿಸುವುದಿಲ್ಲ ಎಂದು ಪ್ರತಿಭಟನಾಕಾರರು ವಾದಿಸಿದ್ದರು.

ಅನೇಕ ಪ್ರಕರಣಗಳಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗಳ ಸಂಖ್ಯೆಗಳು ಆಗಾಗ್ಗೆ ಬದಲಾಗುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇರುವುದಿಲ್ಲ ಮತ್ತು ಇದರಿಂದಾಗಿ ಬ್ಯಾಂಕುಗಳು ಹಲವಾರು ವೇತನ ಪಾವತಿಗಳನ್ನು ತಿರಸ್ಕರಿಸುತ್ತಿವೆ ಎಂದು ಶನಿವಾರ ತಿಳಿಸಿದ ಕೇಂದ್ರವು,ಇಂತಹ ನಿರಾಕರಣೆಗಳನ್ನು ತಪ್ಪಿಸಲು ನೇರ ನಗದು ವರ್ಗಾವಣೆ (ಡಿಬಿಟಿ)ಯ ಮೂಲಕ ವೇತನಗಳನ್ನು ಪಾವತಿಸಲು ಎಬಿಪಿಎಸ್ ಅತ್ಯುತ್ತಮ ಮಾರ್ಗವಾಗಿದೆ. ಇದು ಫಲಾನುಭವಿಗಳು ತಮ್ಮ ವೇತನ ಪಾವತಿಯನ್ನು ಸಕಾಲಕ್ಕೆ ಪಡೆಯಲು ನೆರವಾಗುತ್ತದೆ ಎಂದು ಹೇಳಿದೆ.

ನರೇಗಾ ಯೋಜನೆಯಡಿ 14.28 ಕೋ.ಸಕ್ರಿಯ ಫಲಾನುಭವಿಗಳ ಪೈಕಿ 13.75 ಕೋ.ಕಾರ್ಮಿಕರ ಆಧಾರ್ನ್ನು ಜೋಡಣೆ ಮಾಡಲಾಗಿದೆ. ಈ ಪೈಕಿ ಒಟ್ಟು 12.17 ಕೋ.ಆಧಾರ್ ಸಂಖ್ಯೆಗಳನ್ನು ದೃಢೀಕರಿಸಲಾಗಿದೆ. ಹೀಗಾಗಿ ಈಗ ಶೇ.77.81ರಷ್ಟು ಕಾರ್ಮಿಕರು ಆಧಾರ್ ಆಧರಿತ ಪಾವತಿ ವ್ಯವಸ್ಥೆಗೆ ಅರ್ಹರಾಗಿದ್ದಾರೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಶನಿವಾರ ತಿಳಿಸಿದೆ. ಕಳೆದ ತಿಂಗಳು ಸುಮಾರು ಶೇ.88ರಷ್ಟು ವೇತನ ಪಾವತಿಯನ್ನು ಎಬಿಪಿಎಸ್ ಮೂಲಕ ಮಾಡಲಾಗಿದೆ ಎಂದೂ ಅದು ಹೇಳಿದೆ.

ಎಲ್ಲ ಪಾವತಿಗಳನ್ನು ಆಧಾರ್ ಮೂಲಕ ಮಾಡಲಾಗುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಫಲಾನುಭವಿಗಳಿಗಾಗಿ ಜಾಗೃತಿ ಶಿಬಿರಗಳನ್ನು ಆಯೋಜಿಸುವಂತೆಯೂ ಸಚಿವಾಲಯವು ರಾಜ್ಯ ಸರಕಾರಗಳಿಗೆ ಸೂಚಿಸಿದೆ. ಆಧಾರ್ ಸಂಖ್ಯೆಯನ್ನು ಒದಗಿಸುವಂತೆ ಫಲಾನುಭವಿಗಳನ್ನು ವಿನಂತಿಸಿಕೊಳ್ಳಬೇಕು,ಆದರೆ ಅವರ ಬಳಿ ಆಧಾರ್ ಇಲ್ಲದಿದ್ದರೆ ಕೆಲಸವನ್ನು ನಿರಾಕರಿಸುವಂತಿಲ್ಲ ಎಂದು ಕೇಂದ್ರವು ಸ್ಪಷ್ಟಪಡಿಸಿದೆ.

Similar News