ದಿಲ್ಲಿ ಸಚಿವೆ ಅತಿಷಿ ಬ್ರಿಟನ್ ಭೇಟಿಗೆ ಕೇಂದ್ರದ ಅನುಮತಿ‌

Update: 2023-06-07 17:02 GMT

ಹೊಸದಿಲ್ಲಿ: ದಿಲ್ಲಿ ಶಿಕ್ಷಣ ಸಚಿವೆ ಅತಿಷಿ ಅವರು ಮುಂದಿನ ವಾರ ಅಧಿಕೃತ ಭೇಟಿಗಾಗಿ ಬ್ರಿಟನ್ ಗೆ ಪ್ರಯಾಣಿಸಲು ತಾನು ಅನುಮತಿಯನ್ನು ನೀಡಿರುವುದಾಗಿ ಕೇಂದ್ರ ಸರಕಾರವು ಬುಧವಾರ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ತಿಳಿಸಿತು.

ಪ್ರಸ್ತಾವವನ್ನು ಈಗ ಮುಂದಿನ ಅನುಮೋದನೆಗಳಿಗಾಗಿ ಆರ್ಥಿಕ ವ್ಯವಹಾರಗಳ ಇಲಾಖೆಗೆ ಕಳುಹಿಸಲಾಗಿದೆ, ಅಲ್ಲಿ ಅದು ಸಂಸ್ಕರಿಸಲ್ಪಡಲಿದೆ ಮತ್ತು ಅರ್ಜಿದಾರರು ಅಗತ್ಯ ವೀಸಾ ಪರವಾನಿಗೆಗಳಿಗಾಗಿ ಅರ್ಜಿಯನ್ನು ಸಲ್ಲಿಸಬಹುದು ಎಂದು ಕೇಂದ್ರದ ಪರ ವಕೀಲರು ತಿಳಿಸಿದರು.

ತನ್ನ ಕಕ್ಷಿದಾರರು ಜೂ.14ರಿಂದ 20ರವರೆಗೆ ಬ್ರಿಟನ್ಗೆ ಭೇಟಿ ನೀಡಲಿದ್ದಾರೆ ಎಂದು ಅತಿಷಿ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಜು.15ರಂದು ಕ್ಯಾಂಬ್ರಿಡ್ಜ್ ವಿವಿಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ‘ನೂರರ ಹೊಸ್ತಿಲಲ್ಲಿ ಭಾರತ:ಜಾಗತಿಕ ನಾಯಕನಾಗುವ ನಿಟ್ಟಿನತ್ತ’ ಎಂಬ ವಿಷಯದಲ್ಲಿ ಮಾತನಾಡಲು ಸಚಿವೆಯಾಗಿ ತನ್ನನ್ನು ಅಧಿಕೃತವಾಗಿ ಆಹ್ವಾನಿಸಲಾಗಿದೆ ಎಂದು ಅತಿಷಿ ತನ್ನ ಅರ್ಜಿಯಲ್ಲಿ ತಿಳಿಸಿದ್ದರು.

Similar News