ಔರಂಗಜೇಬ್ ಭಾವಚಿತ್ರವನ್ನು ತನ್ನ ವಾಟ್ಸ್ ಆ್ಯಪ್ ಪ್ರೊಫೈಲ್ ಫೋಟೋ ಆಗಿ ಬಳಸಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

Update: 2023-06-12 09:09 GMT

ಮುಂಬೈ: ತನ್ನ ವಾಟ್ಸ್ ಆ್ಯಪ್ ಪ್ರೊಫೈಲ್ ಪಿಕ್ಚರ್ ಆಗಿ ಮುಗಲ್ ಚಕ್ರವರ್ತಿ ಔರಂಗಜೇಬ್ ಭಾವಚಿತ್ರವನ್ನು ಅಪ್ಲೋಡ್ ಮಾಡಿದ್ದ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ರವಿವಾರ ಮುಂಬೈ ಪೊಲೀಸರು ತಿಳಿಸಿದ್ದಾರೆ. ಆರೋಪಿತ ವ್ಯಕ್ತಿಯು ಮೊಬೈಲ್ ಸೇವಾ ಸಂಸ್ಥೆಯೊಂದರಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾನೆ ಎಂದು ಹೇಳಲಾಗಿದೆ ಎಂದು indiatoday.in ವರದಿ ಮಾಡಿದೆ.

ಪೊಲೀಸರ ಪ್ರಕಾರ, ಅಮರ್‌ಜೀತ್ ಸುರ್ವೆ ಎಂಬವರು ಪ್ರಕರಣ ದಾಖಲಿಸಿದ್ದಾರೆ. ವ್ಯಕ್ತಿಯೊಬ್ಬ ತನ್ನ ಪ್ರೊಫೈಲ್ ಚಿತ್ರವನ್ನಾಗಿ ಔರಂಗಜೇಬ್ ಚಿತ್ರ ಹಾಕಿಕೊಂಡಿರುವ ಸ್ಕ್ರೀನ್‌ಶಾಟ್ ಅನ್ನು ನಾನು ಸ್ವೀಕರಿಸಿದೆ. ರಾಜ್ಯದಲ್ಲಿ ಹಾಲಿ ಔರಂಗಜೇಬ್ ಕುರಿತು ಸೃಷ್ಟಿಯಾಗಿರುವ ವಿವಾದದ ಹಿನ್ನೆಲೆಯಲ್ಲಿ ಆ ಚಿತ್ರವನ್ನು ತೆಗೆಯುವಂತೆ ಆ ವ್ಯಕ್ತಿಯ ಪ್ರೊಫೈಲ್ ಚಿತ್ರದ ಮೇಲಿದ್ದ ಆತನ ಸಂಖ್ಯೆಗೆ ಕರೆ ಮಾಡಿ ಸೂಚಿಸಿದೆ. ಆಗ ಆರೋಪಿಯು ಆ ಚಿತ್ರ ತೆಗೆದು ಹಾಕುತ್ತೇನೆ ಎಂದು ಭರವಸೆ ನೀಡಿದ. ಆದರೆ, ಆ ಚಿತ್ರವನ್ನು ತೆಗೆಯದಿರುವುದು ನನ್ನ ಗಮನಕ್ಕೆ ಬಂದಿತು. ಹೀಗಾಗಿ ನವಿ ಮುಂಬೈನ ವಾಶಿ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲಿಸಿದೆ ಎಂದು ಅಮರ್‌ಜೀತ್ ಸುರ್ವೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 298 (ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಲು ಪದಗಳು ಇತ್ಯಾದಿಯನ್ನು ಉದ್ದೇಶಪೂರ್ವಕವಾಗಿ ಬಳಸುವುದು) ಹಾಗೂ 153-A (ಧರ್ಮ, ಜನಾಂಗ, ಜನ್ಮ ಸ್ಥಳ, ನಿವಾಸದ ಆಧಾರದಲ್ಲಿ ಎರಡು ಭಿನ್ನ ಗುಂಪುಗಳ ನಡುವೆ ದ್ವೇಷವನ್ನು ಪ್ರಚೋದಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ತಮ್ಮ ವಶಕ್ಕೆ ಪಡೆದು, ವಿಚಾರಣೆ ನಡೆಸಿ, ನಂತರ ಬಿಡುಗಡೆ ಮಾಡಿದ್ದಾರೆ.

ಪ್ರಕರಣದ ಸಂಬಂಧ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

ಇದಕ್ಕೂ ಮುನ್ನ, ಮುಘಲ್ ಚಕ್ರವರ್ತಿ ಔರಂಗಜೇಬ್ ಹಾಗೂ ಟಿಪ್ಪು ಸುಲ್ತಾನ್‌ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಕುರಿತು  ಮಹಾರಾಷ್ಟ್ರದ ಹಲವು ನಗರಗಳಲ್ಲಿ ಕೋಮು ಉದ್ವಿಗ್ನ ಘಟನೆಗಳು ನಡೆದಿರುವ ಕುರಿತು ವರದಿಯಾಗಿತ್ತು. 

Similar News