ಒಡಿಶಾ ರೈಲು ಅಪಘಾತ ಪ್ರಕರಣ: ಸಿಗ್ನಲ್ ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆ 2 ತಿಂಗಳ ಮೊದಲೇ ಎಚ್ಚರಿಸಿದ್ದ ರೈಲ್ವೇ ಮಂಡಳಿ

Update: 2023-06-15 15:55 GMT

ಹೊಸದಿಲ್ಲಿ: ಒಡಿಶಾದಲ್ಲಿ ಭೀಕರ ರೈಲು ಅಪಘಾತ ನಡೆಯುವ ಕೇವಲ ಎರಡು ತಿಂಗಳ ಮೊದಲು, ರೈಲ್ವೇ ಮಂಡಳಿಯು, ಸಿಬ್ಬಂದಿಯು ‘‘ಶಾರ್ಟ್ ಕಟ್’’ಗಳನ್ನು ಬಳಸುತ್ತಿರುವ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿತ್ತು ಎಂದು ಪಿಟಿಐ ಗುರುವಾರ ವರದಿ ಮಾಡಿದೆ.

ವಿವಿಧ ವಲಯಗಳ ಜನರಲ್ ಮ್ಯಾನೇಜರ್‌ಗಳಿಗೆ  ರೈಲ್ವೇ ಮಂಡಳಿಯ ಸದಸ್ಯ (ಮೂಲಸೌಕರ್ಯ) ಆರ್.ಎನ್. ಸುಂಕರ್ ಎಪ್ರಿಲ್ 3ರಂದು ಬರೆದ ಪತ್ರದಲ್ಲಿ, ಸಿಗ್ನಲ್ ನೀಡುವಿಕೆಯಲ್ಲಿನ ವೈಫಲ್ಯಕ್ಕೆ ಸಂಬಂಧಿಸಿದ ಐದು ಘಟನೆಗಳನ್ನು ಉಲ್ಲೇಖಿಸಿದ್ದರು. ಇದು ‘‘ಗಂಭೀರ ಕಳವಳ’’ದ ವಿಷಯವಾಗಿದೆ ಎಂದು ಹೇಳಿದ್ದರು.

‘‘ಸ್ವಿಚ್ ಬದಲಾವಣೆಗಾಗಿ ಬ್ಲಾಕ್ ಮಾಡಿದ ಬಳಿಕ, ಸಿಗ್ನಲ್ ಮತ್ತು ಟೆಲಿಕಾಮ್ ಸಿಬ್ಬಂದಿ ಪಾಯಿಂಟ್‌ಗಳ ಸರಿಯಾದ ಪರೀಕ್ಷೆ ನಡೆಸದೆಯೇ ಸಿಗ್ನಲಿಂಗ್ ಗಿಯರ್ಗಳನ್ನು ಮರುಸಂಪರ್ಕಿಸುತ್ತಾರೆ, ಸಿದ್ಧತಾ ಕೆಲಸಗಳ ಸಂದರ್ಭದಲ್ಲಿ ತಪ್ಪಾಗಿ ವಯರಿಂಗ್ ಮಾಡುತ್ತಾರೆ, ಸಿಗ್ನಲ್ ವೈಫಲ್ಯಗಳಿಗೆ ಸರಿಯಾಗಿ ಸ್ಪಂದಿಸುವುದಿಲ್ಲ’’ ಎಂಬುದಾಗಿ ಅವರು ತನ್ನ ಪತ್ರದಲ್ಲಿ ಹೇಳಿದ್ದರು.

ಈ ವೈಫಲ್ಯಗಳು ‘‘ಸೂಚನೆಗಳು ಮತ್ತು  ಕೋಡ್‌ಗಳ ’’ ಪಾಲನೆ ಸಡಿಲಗೊಂಡಿರುವುದನ್ನು ತೋರಿಸುತ್ತದೆ ಹಾಗೂ ಅವುಗಳು ರೈಲುಗಳ ಸುರಕ್ಷತೆಗೆ ಅಪಾಯಕಾರಿಯಾಗಿವೆ’’ ಎಂದು ರೈಲ್ವೇ ಮಂಡಳಿ ಹೇಳಿದೆ.

ಪತ್ರ ಕಳುಹಿಸಿದ ಸರಿಯಾಗಿ ಎರಡು ತಿಂಗಳ ಬಳಿಕ, ಅಂದರೆ ಜೂನ್ 2ರಂದು ಒಡಿಶಾದ ಬಾಲಸೋರ್ನಲ್ಲಿ ಭಾರತದ ಅತ್ಯಂತ ಭೀಕರ ರೈಲು ಅಪಘಾತ ನಡೆಯಿತು. ಯಶವಂತಪುರ-ಹೌರಾ ಎಕ್ಸ್‌ಪ್ರೆಸ್ ರೈಲಿನ ಎರಡು 'ಕೋಚ್‌ಗಳು ಬಹಂಗ ರಸ್ತೆ ರೈಲ್ವೇ ನಿಲ್ದಾಣದ ಸಮೀಪ ಹಳಿ ತಪ್ಪಿತು. ತಪ್ಪಿದ ಹಳಿಗಳು ಇನ್ನೊಂದು ಹಳಿಯಲ್ಲಿ ವೇಗವಾಗಿ ಬರುತ್ತಿದ್ದ ಕೋರಮಂಡಲ ಎಕ್ಸ್‌ಪ್ರೆಸ್‌ಗೆ ಢಿಕ್ಕಿ ಹೊಡೆದವು. 288 ಮಂದಿ ಪ್ರಾಣ ಕಳೆದುಕೊಂಡರು.

Similar News