"ಕುಕಿಗಳ ಜನಾಂಗೀಯ ನಿರ್ಮೂಲನೆಗೆ ಕೇಂದ್ರ, ಬಿರೇನ್ ಸಿಂಗ್ ಕೋಮುವಾದಿ ಕಾರ್ಯಸೂಚಿ"

ಮಣಿಪುರ ಬುಡಕಟ್ಟು ಜನರ ವೇದಿಕೆ ಆರೋಪ

Update: 2023-06-15 16:48 GMT

ಹೊಸದಿಲ್ಲಿ: ಕುಕಿ ಬುಡಕಟ್ಟು ಜನತೆಯನ್ನು ಜನಾಂಗೀಯವಾಗಿ ನಿರ್ಮೂಲನೆಗೊಳಿಸುವ ಕೋಮುವಾದಿ ಕಾರ್ಯಸೂಚಿಯನ್ನು ಕೇಂದ್ರ ಸರಕಾರ ಹಾಗೂ ಮಣಿಪುರ ಮುಖ್ಯಮಂತ್ರಿ  ಜಾರಿಗೊಳಿಸಹೊರಟಿದ್ದಾರೆ ಎಂದು ಬುಡಕಟ್ಟು ಜನರಿಗಾಗಿನ ಎನ್‍ಜಿಓ ಸಂಘಟನೆಯೊಂದು ಸುಪ್ರೀಂಕೋರ್ಟ್ ನಲ್ಲಿ ಆಪಾದಿಸಿದೆ.

ಕುಕಿ ಬುಡಕಟ್ಟು ಜನರ ರಕ್ಷಣೆಯ ಬಗ್ಗೆ ಕೇಂದ್ರ ಸರಕಾರ ನೀಡುತ್ತಿರುವ ಪೊಳ್ಳು ಭರವಸೆಗಳ ಬಗ್ಗೆ ವಿಶ್ವಾಸವಿಡಬಾರದು ಹಾಗೂ ಕುಕಿಗಳಿಗೆ ಸೇನೆಯ ರಕ್ಷಣೆಯನ್ನು ಒದಗಿಸಬೇಕೆಂದು ಅದು ಆಗ್ರಹಿಸಿದೆ. ಮಣಿಪುರ ಹಿಂಸಾಚಾರವನ್ನು ತಡೆಗಟ್ಟಲು ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಬೇಕೆಂದು ಕೋರಿ ತಾನು ಸಲ್ಲಿಸಿದ ‘ಸಂವಾದಾತ್ಮಕ ಅರ್ಜಿ’ಯ ಆಲಿಕೆಯ ವೇಳೆ ‘ಮಣಿಪುರ ಬುಡಕಟ್ಟುಜನರ ವೇದಿಕೆ’ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

‘‘ಕುಕಿ ಬುಡಕಟ್ಟು ಜನರ ರಕ್ಷಣೆ ಬಗ್ಗೆ ಅಧಿಕಾರಿಗಳು ನೀಡಿರುವ ಭರವಸೆಗಳಿಂದ ಯಾವುದೇ ಪ್ರಯೋಜನವಿಲ್ಲ ಮತ್ತು ಅವು ಗಂಭೀರ ಸ್ವರೂಪದ್ದವಲ್ಲ ಮತ್ತು ಅದನ್ನು ಜಾರಿಗೊಳಿಸುವ ಇಂಗಿತವೂ ಸರಕಾರಕ್ಕಿಲ್ಲವೆಂದು ಅದು ಹೇಳಿದೆ. ಸರಕಾರದ ಭರವಸೆಗಳ ಹೊರತಾಗಿಯೂ, ಮಣಿಪುರದ ಹಿಂಸಾಚಾರದಲ್ಲಿ  ಬುಡಕಟ್ಟು ಪಂಗಡಕ್ಕೆ ಸೇರಿದ 81 ಮಂದಿ ಹತ್ಯೆಯಾಗಿದ್ದಾರೆ ಹಾಗೂ 31,410 ಮಂದಿ ನಿರಾಶ್ರಿತರಾಗಿದ್ದಾರೆ ಎಂದು ಈ ಎನ್ಜಿಓ ಸಂಸ್ಥೆಯು ಸುಪ್ರೀಂಕೋರ್ಟ್ ಮೇ 17ರ ವಿಚಾರಣೆ  ಸಂದರ್ಭ ತಿಳಿಸಿತ್ತು.

ಪ್ರಸಕ್ತ ಮಣಿಪುರ ಹಿಂಸಾಚಾರವನ್ನು ಬಹುಸಂಖ್ಯಾತ ಮೈತೇಯಿಗಳು ಹಾಗೂ ಕುಕಿಗಳ ನಡುವಿನ ಸಂಘರ್ಷವೆಂದು ವ್ಯಾಖ್ಯಾನಿಸಕೂಡದು. ಇವೆರಡೂ ಪಂಗಡಗಳು ದೀರ್ಘಸಮಯದಿಂದ ಸಹಬಾಳ್ವೆ ನಡೆಸುತ್ತಾ ಬಂದಿವೆ ಎಂದು ಅರ್ಜಿಯಲ್ಲಿ ಗಮನಸೆಳೆಯಲಾಗಿದೆ.

ಮಣಿಪುರ ಹಿಂಸಾಚಾರದ ಬಗ್ಗೆ ತನಿಖೆಗಾಗಿ ಅಸ್ಸಾಂನ ಮಾಜಿ ಪೊಲೀಸ್ ವರಿಷ್ಠ ಹರೇಕೃಷ್ಣ ದೇಕಾ ನೇತೃತ್ವದ ವಿಶೇಷ ತನಿಖಾ(ಸಿಟ್) ತಂಡ ರಚನೆಯಾಗಬೇಕು ಹಾಗೂ ಹಿಂಸಾಚಾರದಲ್ಲಿ ಮೃತಪಟ್ಟವರ ಬಂಧುಗಳಿಗೆ ಮೂರು ತಿಂಗಳೊಳಗೆ ತಲಾ 2 ಕೋಟಿ ರೂ. ಪರಿಹಾರ ನೀಡಬೇಕೆಂದು ಅರ್ಜಿದಾರರು ಆಗ್ರಹಿಸಿದ್ದಾರೆ.

ಮಣಿಪುರ ಗಲಭೆಗೆ ಸಂಬಂಧಿಸಿ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆಂಬ ಅರ್ಜಿಯಲ್ಲಿ ಉಲ್ಲೇಖಿಸಿರುವುದನ್ನು  ಗಮನಕ್ಕೆ ತೆಗೆದುಕೊಂಡ ನ್ಯಾಯಾಲಯವು, ಸಂಯಮದಿಂದ ವರ್ತಿಸುವಂತೆ ಸಿಎಂಗೆ ಸಲಹೆ ನೀಡುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿತು.

ಬಹುಸಂಖ್ಯಾತ ಮೈತೆ ಸಮುದಾಯಕ್ಕೆ  ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯ ಬಗ್ಗೆ ರಾಜ್ಯ ಸರಕಾರವು ನಾಲ್ಕು ವಾರಗಳೊಳಗೆ ತನ್ನ ಶಿಫಾರಸನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಬೇಕೆಂದು ಮಾರ್ಚ್ 27ರಂದು ಮಣಿಪುರ ಹೈಕೋರ್ಟ್ ಆದೇಶಿಸಿದ ಬಳಿಕ ಮೈತೆ ಹಾಗೂ ಕುಕಿ ಸಮುದಾಯಗಳ ನಡುವೆ ವ್ಯಾಪಕ ಹಿಂಸಾಚಾರ ಭುಗಿಲೆದ್ದಿತ್ತು.

Similar News