ಗುಜರಾತ್‍ನಲ್ಲಿ ವ್ಯಾಪಕ ಹಾನಿ ಮಾಡಿದ 'ಬಿಪರ್ ಜಾಯ್' ಇಂದು ರಾಜಸ್ಥಾನಕ್ಕೆ ಅಪ್ಪಳಿಸುವ ನಿರೀಕ್ಷೆ

Update: 2023-06-16 03:29 GMT

ಜೈಪುರ: ಗುಜರಾತ್‍ನಲ್ಲಿ ವ್ಯಾಪಕ ಹಾನಿಗೆ ಕಾರಣವಾಗಿರುವ ಬಿಪರ್‍ ಜಾಯ್ ಚಂಡಮಾರುತದ ತೀವ್ರತೆ ಕಡಿಮೆಯಾಗಿದ್ದರೂ, ರಭಸದ  ಗಾಳಿ ಇಂದು ರಾಜಸ್ಥಾನವನ್ನು ತಲುಪುವ ನಿರೀಕ್ಷೆ ಇದೆ. ಇದರಿಂದಾಗಿ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತದ ಹವಾಮಾನ ಇಲಾಖೆ ಹೇಳಿದೆ.

"ಬಿಪರ್ ಜಾಯ್ ಚಂಡಮಾರುತ ವಾಯವ್ಯದತ್ತ ಚಲಿಸುತ್ತಿದ್ದು, ನೆರೆಯ ಪಾಕಿಸ್ತಾನದ ಕಡಲತೀರದ ಪಕ್ಕ ಜಕಾವು ಬಂದರಿನ ಮೂಲಕ ಸೌರಾಷ್ಟ್ರ- ಕಚ್ ಪ್ರದೇಶವನ್ನು ದಾಟಿದೆ. ಇದೀಗ ಚಂಡಮಾರುತ ಸಮುದ್ರದಿಂದ ಭೂಮಿಗೆ ಚಲಿಸಿದ್ದು, ಸೌರಾಷ್ಟ್ರ- ಕಚ್ ಪ್ರದೇಶದತ್ತ ಸಾಗಿದೆ. ಗಾಳಿಯ ತೀವ್ರತೆ ಗಂಟೆಗೆ 105-115 ಕಿಲೋಮೀಟರ್‍ಗೆ ಇಳಿದಿದ್ದು, ಅತ್ಯಂತ ತೀವ್ರ ಚಂಡಮಾರುತ ವಾಗಿದ್ದ ಬಿಪರ್‍ಜಾಯ್ ಈಗ ತೀವ್ರ ಚಂಡಮಾರುತ ವರ್ಗಕ್ಕೆ ಬಂದಿದೆ. ಜೂನ್ 16ರಂದು ರಾಜಸ್ಥಾನದಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ" ಎಂದು ಐಎಂಡಿ ನಿರ್ದೇಶಕ ಮೃತ್ಯುಂಜಯ ಮಹೋಪಾತ್ರ ಹೇಳಿದ್ದಾರೆ.

ಗುಜರಾತ್‍ಗೆ ಚಂಡಮಾರುತ ಅಪ್ಪಳಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿ ಪರಿಸ್ಥಿತಿ ಅವಲೋಕಿಸಿದರು. ಗೀರ್ ಅರಣ್ಯದ ಸಿಂಹಗಳ ರಕ್ಷಣೆ ಸೇರಿದಂತೆ ಕಾಡುಪ್ರಾಣಿಗಳ ರಕ್ಷಣೆಗೆ ಕೈಗೊಂಡ ಕ್ರಮಗಳ ಬಗ್ಗೆಯೂ ಮಾಹಿತಿ ಪಡೆದರು ಎಂದು ಮೂಲಗಳು ಹೇಳಿವೆ.

ಗುಜರಾತ್‍ನಲ್ಲಿ ಬಿಪರ್‍ಜಾಯ್ ಅಬ್ಬರಕ್ಕೆ 22 ಮದಿ ಗಾಯಗೊಂಡಿದ್ದು, ಹಲವು ಕಡೆಗಳಲ್ಲಿ ಮರಳು ಉರುಳಿವೆ. 150ಕ್ಕೂ ಹೆಚ್ಚು ಗ್ರಾಮಗಳಲ್ಲಿ ವಿದ್ಯತ್ ಸಂಪರ್ಕ ಕಡಿತಗೊಂಡಿದೆ.

Similar News