ವಿದ್ಯಾರ್ಥಿಗಳಿಗೆ ಸೆಮಿನರಿಯ ಹೊರಗಿನ ಕೋರ್ಸ್‌ಗಳಿಗೆ ನಿಷೇಧ: ದಿಯೋಬಂದ್ ಗೆ ಉ.ಪ್ರ. ಅಲ್ಪಸಂಖ್ಯಾತ ಆಯೋಗ ನೋಟಿಸ್

Update: 2023-06-16 16:50 GMT

ಲಕ್ನೋ: ತನ್ನ ಶಿಕ್ಷಣಸಂಸ್ಥೆಯಲ್ಲಿ ಕಲಿಯುತ್ತಿರುವವರು ಇತರ ಸಂಸ್ಥೆಗಳಲ್ಲಿ ಇಂಗ್ಲೀಷ್ ನಂತಹ ಕೋರ್ಸ್ ಗಳನ್ನು ಕಲಿಯುವುದನ್ನು ಖ್ಯಾತ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಸಂಸ್ಥೆ ದಾರೂಲ್ ಊಲೂಮ್ ದಿಯೋ ಬಂದ್ ನಿಷೇಧಿಸಿರುವುದಕ್ಕಾಗಿ ಉತ್ತರಪ್ರದೇಶ ಅಲ್ಪಸಂಖ್ಯಾತ ಆಯೋಗವು ಮದ್ರಸಾದ ಅಧಿಕಾರಿಗೆ ನೋಟಿಸ್ ಜಾರಿಗೊಳಿಸಿದೆ.

ಉತ್ತರಪ್ರದೇಶದ ಅಲ್ಪಸಂಖ್ಯಾತ ಆಯೋಗದ ಕಾರ್ಯದರ್ಶಿ ಶಕೀಲ್ ಅಹ್ಮದ್ ಸಿದ್ದೀಕಿ ಅವರು ಶುಕ್ರವಾರ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ, ‘‘ ದಾರೂಲ್ ಊಲೂಮ್ ದಿಯೋಬಂದ್ನಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಇತರ ಮಾಧ್ಯಮ(ಇಂಗ್ಲೀಷ್)ಗಳಲ್ಲಿ ಯಾವುದೇ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದಿರುವುದು ಉತ್ತರ ಪ್ರದೇಶದ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರ ಗಮನಕ್ಕೆ ಬಂದಿದೆ’’ ಎಂದು ತಿಳಿಸಿದ್ದಾರೆ.

‘‘ ಈ ವಿಷಯವಾಗಿ ಸ್ವಯಂಪ್ರೇರಿತ ನಿರ್ಣಯವನ್ನು ಕೈಗೊಂಡ ದಾರೂಲ್ ಉಲೂಮ್ ದಿಯೋಬಂದ್ನ ಶಿಕ್ಷಣ ವಿಭಾಗದ ಮ್ಯಾನೇಜರ್ ಅವರು ಜೂನ್ 21ರಂದು ಆಯೋಗದ ಮುಂದೆ ಹಾಜರಾಗಬೇಕು’’ ಎಂದು ಆಯೋಗದ ಹೇಳಿಕೆ ತಿಳಿಸಿದೆ.

ಆಯೋಗದ ಆದೇಶದ ಉಲ್ಲಂಘನೆಯು ದಂಡನೀಯ ಅಪರಾಧವಾಗಿದ್ದು,, ಭಾರತೀಯ ದಂಡಸಂಹಿತೆಯ ವಿವಿಧ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆಯೋಗದ ಹೇಳಿಕೆ ತಿಳಿಸಿದೆ.

Similar News