ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದ ಮಲಯಾಳಂ ಚಿತ್ರ ನಿರ್ದೇಶಕ ರಾಮಸಿಂಹನ್ ಬಿಜೆಪಿಗೆ ರಾಜೀನಾಮೆ

Update: 2023-06-16 18:26 GMT

ತಿರುವನಂತಪುರ: ಬಿಜೆಪಿಯನ್ನು ತೊರೆಯುವುದಾಗಿ ಮಲಯಾಳಂ ಚಿತ್ರನಿರ್ದೇಶಕ ಹಾಗೂ ಸಂಘಪರಿವಾರದ ಕಾರ್ಯಕರ್ತ ರಾಮಸಿಂಹನ್ ಅಬೂಬಕ್ಕರ್ ಗುರುವಾರ ಘೋಷಿಸಿದ್ದಾರೆ.

ರಾಮಸಿಂಹನ್ ಅಬೂಬಕರ್ ಅವರ ಮೂಲ ಹೆಸರು ಅಲಿ ಅಕ್ಬರ್ ಎಂದಾಗಿದೆ. 2021ರಲ್ಲಿ ಹಿಂದೂಧರ್ಮಕ್ಕೆ ಮತಾಂತರಗೊಂಡಿರುವುದಾಗಿ ಹೇಳಿದ್ದ ಅವರು ತನ್ನ ಹೆಸರನ್ನು ರಾಮಸಿಂಹನ್ ಅಬೂಬಕರ್ ಎಂದು ಬದಲಾಯಿಸಿದ್ದರು. ಬಿಜೆಪಿಯ ರಾಜ್ಯ ಸಮಿತಿಯ ಸದ್ಯರಾಗಿದ್ದ ಅವರು 2021ರಲ್ಲಿ ಪಕ್ಷದ ಎಲ್ಲಾ ಸಾಂಸ್ಥಿಕ ಹೊಣೆಗಾರಿಕೆಗಳಿಗೆ ರಾಜೀನಾಮೆ ಸಲ್ಲಿಸಿದ್ದರು.

ಬಿಜೆಪಿ ತ್ಯಜಿಸುವ ತನ್ನ ನಿರ್ಧಾರದ ಬಗ್ಗೆ ಯಾವುದೇ ಗುಲ್ಲು ಹರಡದಂತೆ ‘ಪುಳ ಮುದಲ್ ಪುಳವರೆ’ ಚಿತ್ರದ ನಿರ್ದೇಶಕರೂ ಆದ ಅಬೂಬಕರ್ ಫೇಸ್ಬುಕ್ನಲ್ಲಿ ಮನವಿ ಮಾಡಿದ್ದಾರೆ. ‘ನಾನು ಎಲ್ಲಿಯೂ ಹೋಗಲಾರೆ ಹಾಗೂ ನಾನು ಅಧ್ಯಯನ ಮಾಡಿರುವ ಧರ್ಮದ ಜೊತೆ ಸಾಗುವೆ ಎಂದವರು ಹೇಳಿದ್ದಾರೆ.

ಗುರುವಾರ ಈ ಬಗ್ಗೆ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಅವರು, ‘‘ನಾನು ಧರ್ಮ ಒಂದನ್ನು ಹೊರತುಪಡಿಸಿ ಉಳಿದ ಎಲ್ಲದರಿಂದಲೂ ಮುಕ್ತನಾಗಿದ್ದೇನೆ’’ ಎಂದರು.

ಕೇರಳದಲ್ಲಿ ಕಳೆದ ಎರಡು ವಾರಗಳಲ್ಲಿ ಬಿಜೆಪಿಯನ್ನು ತ್ಯಜಿಸಿದ ಚಿತ್ರರಂಗದ ಮೂರನೇ ವ್ಯಕ್ತಿಯಾಗಿದ್ದಾರೆ.ಇದಕ್ಕೂ ಮುನ್ನ ಮಲಯಾಳಂ ಚಿತ್ರ ನಿರ್ದೇಶಕ ರಾಜಸೇನನ್ ಹಾಗೂ ನಟ ಭೀಮನ್ ರಘು ಅವರು ಬಿಜೆಪಿಗೆ ರಾಜೀನಾಮೆ ನೀಡಿ, ಸಿಪಿಎಂಗೆ ಸೇರ್ಪಡೆಯಾಗುವ ನಿರ್ಧಾರವನ್ನು ಪ್ರಕಟಿಸಿದ್ದರು.

ಅಬೂಬಕರ್ ಫೇಸ್ಬುಕ್ ನಲ್ಲಿ ಪ್ರಸಾರ ಮಾಡಿದ ಇನ್ನೊಂದು ಪೋಸ್ಟ್ ನಲ್ಲಿ, ತಾನು ಬಿಜೆಪಿಗೆ ರಾಜೀನಾಮೆ ನೀಡಿ ಕೆಲವು ದಿನಗಳೇ ಕಳೆದಿವೆ. ಈಗಷ್ಟೇ ಬಹಿರಂಗವಾಗಿದೆಯಷ್ಟೇ ಎಂದವರು ಹೇಳಿದ್ದಾರೆ. ಧರ್ಮದೊಂದಿಗೆ ಓರ್ವ ವ್ಯಕ್ತಿ ಸಾಗಬೇಕಾದರೆ, ಅಲ್ಲಿ ಯಾವುದೇ ನಂಟುಗಳಿರಬಾರದು’’ ಎಂದು ಹೇಳಕೊಂಡಿದ್ದಾರೆ.

ಕೇರಳದಲ್ಲಿ ಮುಸ್ಲಿಂ ಬಿಜೆಪಿ ನಾಯಕನೊಬ್ಬನ ವಿರುದ್ಧ ಪಕ್ಷದ ಕೇರಳ ಘಟಕವು ಸಾಂಸ್ಥಿಕ ಮಟ್ಟದ ಶಿಸ್ತುಕ್ರಮ ಕೈಗೊಂಡಿದ್ದುದಕ್ಕೆ ನೊಂದು ಅಬೂಬಕರ್ ಅವರು 2021ರಲ್ಲಿ ಬಿಜೆಪಿಯ ಎಲ್ಲಾ ಹೊಣೆಗಾರಿಕೆಗಳಿಗೆ ರಾಜೀನಾಮೆ ನೀಡಿದ್ದರು. ಆದರೆ ಪಕ್ಷದ ಕಾರ್ಯಕರ್ತನಾಗಿ ಮುಂದುವರಿಯುವುದಾಗಿ ತಿಳಿಸಿದ್ದರು.

ಇದೀಗ ಅವರು ಪಕ್ಷದ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ಅಬೂಬಕರ್ ನಿರ್ದೇಶನ ‘ಪುಳ ಮುದಲ್ ಪುಳವರೆ’ ಚಿತ್ರವು 1921ರಲ್ಲಿ ಕೇರಳದಲ್ಲಿ ನಡೆದ ಮಾಪಿಳ್ಳದಂಗೆಯ ಕುರಿತಾದ ಕಥಾವಸ್ತುವನ್ನು ಹೊಂದಿತ್ತು.

Similar News