ಕಾಂಗ್ರೆಸ್‌ ಸೇರುವ ಬದಲು ಬಾವಿಗೆ ಹಾರುವೆ:ಪಕ್ಷಕ್ಕೆ ಆಹ್ವಾನಿಸಿದ ಕೈ ನಾಯಕನಿಗೆ ನೀಡಿದ ಉತ್ತರವನ್ನು ನೆನಪಿಸಿದ ಗಡ್ಕರಿ

Update: 2023-06-17 13:48 GMT

ನಾಗ್ಪುರ್:‌ ರಾಜಕಾರಣಿಯೊಬ್ಬರು ಒಮ್ಮೆ ತಮಗೆ ಕಾಂಗ್ರೆಸ್‌ ಸೇರಲು ಆಫರ್‌ ನೀಡಿದಾಗ, ತಾವು  ಆ ಪಕ್ಷದ ಸದಸ್ಯರಾಗುವುದಕ್ಕಿಂತ ಬಾವಿಗೆ ಹಾರುವುದು ಲೇಸು ಎಂದು ಉತ್ತರಿಸಿದ್ದಾಗಿ ಕೇಂದ್ರ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಮೋದಿ ಸರ್ಕಾರ ಒಂಬತ್ತು ವರ್ಷ ಪೂರೈಸಿದ ಅಂಗವಾಗಿ ಶುಕ್ರವಾರ ಮಹಾರಾಷ್ಟ್ರದ ಭಂಡಾರ ಎಂಬಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಗಡ್ಕರಿ ಮೇಲಿನಂತೆ ಹೇಳಿದ್ದಾರೆ.

ಕಾಂಗ್ರೆಸ್‌ ನಾಯಕ ಶ್ರೀಕಾಂತ್‌ ಜಿಚ್ಕರ್‌ ಕಾಂಗ್ರೆಸ್‌ ಸೇರಲು ಆಫರ್‌ ನೀಡಿದ್ದಾಗಿಯೂ ಅವರು ಹೇಳಿದ್ದರು.

“ಜಿಚ್ಕರ್‌ ಒಮ್ಮೆ ನನ್ನ ಬಳಿ- ನೀವೊಬ್ಬ ಒಳ್ಳೆಯ ಕಾರ್ಯಕರ್ತ ಮತ್ತು ನಾಯಕ. ನೀವು ಕಾಂಗ್ರೆಸ್‌ ಸೇರಿದರೆ ನಿಮ್ಮ ಭವಿಷ್ಯ ಉಜ್ವಲವಾಗುವುದು- ಎಂದು ಹೇಳಿದರು. ಅದಕ್ಕೆ ನಾನು ಕಾಂಗ್ರೆಸ್‌ ಸೇರುವ ಬದಲು ಬಾವಿಗೆ ಹಾರುವುದಾಗಿ ಹೇಳಿದೆ ಹಾಗೂ ನನಗೆ ಬಿಜೆಪಿ ಮತ್ತದರ ಸಿದ್ಧಾಂತದ ಮೇಲೆ ಬಲವಾದ ವಿಶ್ವಾಸವಿದೆ ಹಾಗೂ ಆ ಪಕ್ಷಕ್ಕಾಗಿ ದುಡಿಯುವುದನ್ನು ಮುಂದುವರಿಸುತ್ತೇನೆ ಎಂದು ಹೇಳಿದೆ,” ಎಂದು ಗಡ್ಕರಿ ಹೇಳಿದರು.

ಕಾಂಗ್ರೆಸ್‌ ಪಕ್ಷದ ಕುರಿತು ಮಾತನಾಡಿದ ಗಡ್ಕರಿ ಆ ಪಕ್ಷ ಸ್ಥಾಪನೆಯಾದಂದಿನಿಂದ ಹಲವು ಬಾರಿ ಒಡೆದಿದೆ ಎಂದು ಹೇಳಿದರು. “ನಮ್ಮ ದೇಶದ ಪ್ರಜಾಪ್ರಭುತ್ವದ ಇತಿಹಾಸವನ್ನು ನಾವು ಮರೆಯಬಾರದು. ಭವಿಷ್ಯಕ್ಕಾಗಿ ನಾವು ಇತಿಹಾಸದಿಂದ ಕಲಿಯಬೇಕು. ತನ್ನ 60 ವರ್ಷ ಆಡಳಿತದಲ್ಲಿ ಕಾಂಗ್ರೆಸ್‌ ʼಗರೀಬಿ ಹಠಾವೋʼ ಘೋಷಣೆ ನೀಡಿತ್ತು ಆದರೆ ವೈಯಕ್ತಿಕ ಲಾಭಕ್ಕಾಗಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ತೆರೆಯಿತು,” ಎದು ಗಡ್ಕರಿ ಹೇಳಿದರು.

“ಕಾಂಗ್ರೆಸ್‌ ಪಕ್ಷ ತನ್ನ 60 ವರ್ಷದ ಆಡಳಿತದಲ್ಲಿ ಮಾಡಲು ಸಾಧ್ಯವಾಗದ ಎರಡು ಪಟ್ಟು ಕೆಲಸವನ್ನು ಬಿಜೆಪಿ ಸರ್ಕಾರ ಕಳೆದ ಒಂಬತ್ತು ವರ್ಷಗಳಲ್ಲಿ ಮಾಡಿದೆ,” ಎಂದು ಗಡ್ಕರಿ ಹೇಳಿದರು.

ಭಾರತವನ್ನು ಆರ್ಥಿಕ ಸೂಪರ್‌ಪವರ್‌ ಆಗಿಸುವಲ್ಲಿ ಪ್ರಧಾನಿ ಮೋದಿಯ ದೂರದೃಷ್ಟಿಯನ್ನು ಶ್ಲಾಘಿಸಿದ ಗಡ್ಕರಿ, ದೇಶದ ಭವಿಷ್ಯ ಉಜ್ವಲವಾಗಿದೆ ಎಂದು ಹೇಳಿದರು.

Similar News