ಬಾಗಲಕೋಟೆ ಕಾಂಗ್ರೆಸ್ ನಲ್ಲಿ ಭಿನ್ನಮತ : ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯಲು ನಿರ್ಧರಿಸಿದ ವೀಣಾ ಕಾಶಪ್ಪನವರ್

Update: 2024-03-29 11:31 GMT

ಬಾಗಲಕೋಟೆ : ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಯುಕ್ತಾ ಪಾಟೀಲ್ ಘೋಷಣೆ ಆದ ಬಳಿಕ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯ ಶಮನ ತಣ್ಣಗೆ ಆಗುವ ಲಕ್ಷಣ ಕಾಣುತ್ತಿಲ್ಲ.

ಸಂಯುಕ್ತಾ ಪಾಟೀಲ್ ಅಭ್ಯರ್ಥಿಯಾದ ಬಳಿಕ ಬಾಗಲಕೋಟೆ ಟಿಕೆಟ್ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು,‌ ಸಿಎಂ ಡಿಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಧಾನ ವಿಫಲವಾಗಿದೆ. ಈಗ ವೀಣಾ ಕಾಶಪ್ಪನವರ ಏನು ಮಾಡಬೇಕು ಎಂದು ತಿಳಿಯದೆ ತಟಸ್ಥರಾಗಿ ಉಳಿಯಬೇಕು ಎಂದು ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ವೀಣಾ ಕಾಶಪ್ಪನವರ್ ಸೋಲು ಕಂಡರೂ, ದೃತಿಗೆಡದೆ ಮತ್ತೆ ಇಡೀ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಾ, ತಮ್ಮದೇ ಆದ ಛಾಪು ಮೂಡಿಸಿದ್ದರು.‌ ಆದರೆ ಕೊನೆಯ ಘಳಿಗೆಯಲ್ಲಿ ಹೈಕಮಾಂಡ್ ಸಂಯುಕ್ತಾ ಪಾಟೀಲ ಮಣೆ ಹಾಕಿತ್ತು.

ಕಳೆದ ದಿನ ಸಿಎಂ ಸಿದ್ದರಾಮಯ್ಯನವರು, ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಟಿಕೆಟ್ ಬದಲಾವಣೆ ಮಾಡಲು ಸಾಧ್ಯವಿಲ್ಲ.‌ ಪಕ್ಷವು ಕ್ಷೇತ್ರದಲ್ಲಿ ಹೆಚ್ಚಿನ ಮತಗಳ ಅಂತರ ಗೆಲ್ಲಿಸುವಂತೆ ಶ್ರಮ ವಹಿಸಿ, ಮುಂದೆ ಏನಾದರೂ ಮಾಡೋಣ ಎಂದು ಹೇಳಿದ್ದಾರೆ.

ಐದು ವರ್ಷದಿಂದ ಕೆಲಸ ಮಾಡಿದರೂ, ಈಗ ತಾನೆ ಬಂದಿರುವ ಸಂಯುಕ್ತಾ ಪರ ಎಲ್ಲರೂ ಬೆಂಬಲಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಂಘಟನೆ ಮಾಡಿದರೆ ಸೂಕ್ತ ಸ್ಥಾನ ಮಾನ ಸಿಗಲ್ಲ. ನಾನು ಏಕೆ ಈಗ ಚುನಾವಣೆ ಗೆ ಕೆಲಸ ಮಾಡಬೇಕು. ನನಗೆ ಅನ್ಯಾಯವಾಗಿದೆ. ತಟಸ್ಥ ಉಳಿಯುತ್ತೇನೆ ಎಂದು ಹೇಳಿದ್ದಾರೆ. ಈ ಹಿಂದೆ ಬಿಜೆಪಿ ಪಕ್ಷದಲ್ಲಿ ಆಹ್ವಾನ ಬಂದಿತ್ತು. ಆದರೆ ಕಾಂಗ್ರೆಸ್ ‌ಪಕ್ಷದಲ್ಲಿನ ನಿಷ್ಠೆ ಹಾಗೂ ಇಲ್ಲಿಯೇ ಟಿಕೆಟ್ ಸಿಗುತ್ತೆ ಎಂಬ ಕಾರಣದಿಂದಾಗಿ ನಿರಾಕರಿಸಿದ್ದರು.

ಈಗ ಸ್ವಪಕ್ಷದಲ್ಲಿ ಅನ್ಯಾಯವಾಗಿದೆ. ಕಾಂಗ್ರೆಸ್ ‌ಪಕ್ಷದ ರಾಜ್ಯ ಮಹಿಳಾ ಘಟಕ ಉಪಾಧ್ಯಕ್ಷೆ ಸ್ಥಾನ ಸೇರಿದಂತೆ ಪಕ್ಷದ ಇತರ ಹುದ್ದೆಗಳಿಗೆ ರಾಜಿನಾಮೆ ನೀಡಿ, ತಟಸ್ಥ ಉಳಿಯಲು ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಸಕರು ಆಗಿರುವ ಪತಿ ವಿಜಯಾನಂದ ಕಾಶಪ್ಪನವರ ಲಿಂಗಾಯತ ಅಭಿವೃದ್ಧಿ ನಿಗಮ ನೀಡಿದ್ದಾರೆ. ಹೀಗಾಗಿ ಪತಿಯವರಿಗೆ ವಿರೋಧ ಮಾಡಿ, ಪಕ್ಷೇತರ ನಿಲ್ಲಲ್ಲು ಸಾಧ್ಯ ಇಲ್ಲ. ರಾಜ್ಯ ಮಟ್ಟದ ಮಹಿಳಾ ಘಟಕದ ಅಧ್ಯಕ್ಷರಾಗುವಂತೆ ಆಹ್ವಾನ ನೀಡಿದ್ದಾರೆ. ಆದರೆ ಇದು ಸಹ ಕೆಲಸ ಮಾಡುವುದು ಅಷ್ಟೇ, ಕ್ಷೇತ್ರದಲ್ಲಿ ಸಂಘಟನೆ ಮಾಡಿ, ಅಧಿಕಾರ ಸಿಗುವುದು ಖಚಿತ ಇತ್ತು. ಕೊನೆಯ ಘಳಿಗೆಯಲ್ಲಿ ಅನ್ಯಾಯ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷ ನಡೆಸಿಕೊಂಡ ರೀತಿಗೆ ಬೇಸರಗೊಂಡ ತಟಸ್ಥರಾಗಿ ಉಳಿಯಲು ನಿರ್ಧಾರ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News