ಪಿಎಸ್ಐ ಆಗುವ ಕನಸು ಕಂಡಿದ್ದ ಮಗಳ ಜೊತೆ ತಾಯಿಯ ಸಜೀವ ದಹನ
ಬಾಗಲಕೋಟೆ : ಮಂಗಳವಾರ ಬೆಳ್ಳಂಬೆಳಗ್ಗೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬೆಳಗಲಿ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ವರದಿಯಾಗಿದ್ದು, ಘಟನೆಯ ಭೀಕರತೆಯನ್ನು ಕಂಡು ಜನ ಬೆಚ್ಚಿ ಬಿದ್ದಿದ್ದಾರೆ.
ಬೆಳಗಲಿ ಗ್ರಾಮದ ತೋಟವೊಂದರಲ್ಲಿ ನಿರ್ಮಿಸಲಾಗಿದ್ದ ಶೆಡ್ನಲ್ಲಿ ಕುಟುಂಬವೊಂದು ಮಲಗಿದ್ದಾಗ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಶೆಡ್ ಗೆ ಬೆಂಕಿಯಿಟ್ಟಿದ್ದರು. ಪರಿಣಾಮ ಶೆಡ್ ನಲ್ಲಿ ಮಲಗಿದ್ದ ತಾಯಿ–ಮಗಳು ಸಜೀವ ದಹನವಾಗಿದ್ದಾರೆ. ಅಲ್ಲದೆ ಮತ್ತಿಬ್ಬರಿಗೆ ಗಾಯಗಳಾಗಿದ್ದು, ಓರ್ವ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ತಾಯಿ ಜೈಬಾನು (55) ಹಾಗೂ ಪುತ್ರಿ ಶಬಾನಾ (29) ಮೃತಪಟ್ಟಿದ್ದು, ಜೈಬಾನು ಅವರ ಪತಿ ದಸ್ತಗೀರ (64) ಮತ್ತು ಪುತ್ರ ಸುಬಾನ್ (27) ಅವರಿಗೆ ಗಾಯವಾಗಿದೆ. ಶಬಾನಾ ಸಹೋದರಿಯ ಪುತ್ರ ಸಿದ್ದಿಕ್ ಶೌಕತ್ ಗೆ (19) ಅಲ್ಪ ಗಾಯವಾಗಿದೆ.
ಕುಟುಂಬದ ಐವರು ಸದಸ್ಯರು ಮಲಗಿದ್ದ ವೇಳೆ ಮಧ್ಯರಾತ್ರಿ 2 ರಿಂದ 3 ಗಂಟೆ ನಡುವೆ ದುಷ್ಕರ್ಮಿಗಳು 200 ಲೀಟರ್ ಸಾಮರ್ಥ್ಯದ ಸಿಂಟೆಕ್ಸ್‌ನಲ್ಲಿ ಪೆಟ್ರೋಲ್ ತುಂಬಿ, ಅದಕ್ಕೆ 3 ಮೋಟರ್ ಬಳಸಿ ಪೈಪ್ ಮೂಲಕ ಶೆಡ್‌ಗೆ ಪೆಟ್ರೋಲ್ ಸುರಿದಿದ್ದಾರೆ ಎನ್ನಲಾಗಿದೆ. ನಂತರ ಶೆಡ್‌ನ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿ, ಬೆಂಕಿ ಹಚ್ಚಿದ್ದಾರೆ.
‘ಶೆಡ್ ನಲ್ಲಿ ಮಲಗಿದ್ದ ಶಬಾನಾ ಸಹೋದರಿಯ ಪುತ್ರ ಸಿದ್ದಿಕ್ ಗೆ ತಕ್ಷಣವೇ ಎಚ್ಚರವಾಗಿದ್ದು, ಎಲ್ಲರನ್ನೂ ಎಬ್ಬಿಸಿ ಶೆಡ್‌ನ ಕಟ್ಟಿಗೆ ಮುರಿದು ಹೊರಬಂದಿದ್ದಾರೆ. ಅಷ್ಟರಲ್ಲಿ ಬೆಂಕಿ ತೀವ್ರವಾಗಿ ವ್ಯಾಪಿಸಿದೆ. ಉಳಿದ ನಾಲ್ವರು ಶೆಡ್‌ನಿಂದ ಹೊರಬರಲು ಮತ್ತು ಪರಸ್ಪರ ಉಳಿಸಲು ಪ್ರಯತ್ನಿಸಿದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಅವಘಡದಲ್ಲಿ ಸಿದ್ದೀಕ್ ಬಚಾವಾಗಿದ್ದು, ದಸ್ತಗೀರ್ ಗಾಯಗೊಂಡಿದ್ದಾರೆ. ಇಬ್ಬರನ್ನೂ ಚಿಕಿತ್ಸೆಗಾಗಿ ಮಹಾಲಿಂಗಪುರ ಆಸ್ಪತ್ರಗೆ ದಾಖಲಿಸಲಾಗಿದೆ. ಘಟನೆಯಲ್ಲಿ ತಾಯಿ-ಮಗಳ ಮೃತದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ದುಷ್ಕರ್ಮಿಗಳು ಇಡೀ ಕುಟುಂಬವನ್ನು ಮುಗಿಸಲು ಈ ದುಷ್ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.
‘ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಐದು ತಂಡಗಳನ್ನು ರಚಿಸಲಾಗಿದ್ದು, ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ. ಸ್ಥಳಕ್ಕೆ ಮಹಾಲಿಂಗಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಅಮರನಾಥರೆಡ್ಡಿ ಭೇಟಿ ನೀಡಿ, ಘಟನೆ ವಿವರಣೆ ಪಡೆದುಕೊಂಡಿದ್ದಾರೆ. ಶ್ವಾನದಳದ ನೆರವಿನಿಂದ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಪಿಎಸ್ಐ ಆಗುವ ಕನಸು ಕಂಡಿದ್ದ ಶಬಾನ :
ದುಷ್ಟರು ಹಚ್ಚಿದ ಬೆಂಕಿಗೆ ಸುಟ್ಟು ಮೃತಪಟ್ಟ ಶಬಾನ ಪಿಎಸ್ಐ ಆಗೋ ಕನಸು ಕಂಡಿದ್ದಳು. ಮುಧೋಳದಲ್ಲಿ ಎಂಎ ವ್ಯಾಸಂಗ ಮಾಡುತ್ತಿದ್ದ ಶಬಾನ ಪಿಎಸ್ಐ ಆಗಬೇಕು ಎಂದು ಶ್ರಮಿಸುತ್ತಿದ್ದಳು. ಶಬಾನ ಮೃತದೇಹ ಕಂಡು ಆಕೆಯ ಸಹೋದರಿ ಕಣ್ಣೀರು ಹಾಕಿದ್ದಾರೆ. ನನ್ನ ತಂಗಿ ಎಂಎ ಪದವಿ ಓದುತ್ತಿದ್ದಳು. ಪಿಎಸ್ಐ ಪರೀಕ್ಷೆಗೆ ಸಿದ್ಧತೆ ನಡೆಸಿದ್ಲು. ಎರಡು ಬಾರಿ ದೈಹಿಕ ಪರೀಕ್ಷೆ ಪಾಸ್ ಮಾಡಿದ್ದಳು. ಇನ್ನೊಮ್ಮೆ ಊರಿಗೆ ಬಂದ್ರೆ ಪಿಎಸ್ಐ ಆಗಿಯೇ ಬರುತ್ತೇನೆ ಎನ್ನುತ್ತಿದ್ದಳು. ಮೈ ಮೇಲೆ ಖಾಕಿ ಬಟ್ಟೆ ಹಾಕಿಕೊಂಡು ಬರ್ತೇನೆ ಅಂದವಳು ಬಿಳಿ ಬಟ್ಟೆ ಹಾಕಿಕೊಂಡು ಹೋಗೋ ಹಾಗೆ ಆಯ್ತು. ನನ್ನ ತಾಯಿ ಹಾಗೂ ತಂಗಿಯ ಮುಖ ನೋಡಲು ಆಗದಂತೆ ಆಗಿದೆ. ಇಂತಹ ಕೃತ್ಯ ಮಾಡಿದವರಿಗೆ ಜೀವಾವಧಿ, ಗಲ್ಲು ಶಿಕ್ಷೆ ಆಗಬಾರದು. ಅವರನ್ನು ಸಾರ್ವಜನಿಕವಾಗಿ ತುಂಡು ತುಂಡಾಗಿ ಕತ್ತರಿಸಬೇಕು ಎಂದು ತಾಯಿ ಹಾಗೂ ಸಹೋದರಿಯ ಮೃತದೇಹದ ಮುಂದೆ ಸಹೋದರಿ ರೇಷ್ಮಾ ಕಣ್ಣೀರು ಹಾಕಿ ಆಕ್ರೋಶ ಹೊರ ಹಾಕಿದ್ದಾರೆ.