ಆನೇಕಲ್: ಎರಡು ಹಸುಗಳನ್ನು ತಿಂದ ಚಿರತೆ ಸೆರೆ
Update: 2025-01-29 12:22 IST

ಬೆಂಗಳೂರು,ಜ29: ವಾರದ ಹಿಂದೆ ಎರಡು ಹಸುಗಳನ್ನು ತಿಂದಿದ್ದ ಚಿರತೆ ಇಂದು ಬೆಳಗ್ಗೆ ಅರಣ್ಯ ಇಲಾಖೆ ಬೋನಿನಲ್ಲಿ ಸೆರೆ ಸಿಕ್ಕಿದೆ.
ಆನೇಕಲ್ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿನ ಬೇಗಿಹಳ್ಳಿ ಸರ್ವೆ ನಂ: 182, ವಾಟಿಕಾ ಬಡಾವಣೆಯ ಬಿವಿಎಸ್ ದಯಾಲ್ಸ್ ಜನವಸತಿ ಬಡಾವಣೆ ಬಳಿಯಲ್ಲಿ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ.
ಎಂಟು ವರ್ಷ ಪ್ರಾಯದ ಗಂಡು ಚಿರತೆ ಇದಾಗಿದ್ದು, ಈಗಾಗಲೇ ಇದೇ ಜಾಗದಲ್ಲಿ ವಾರದ ಹಿಂದೆ ಎರಡು ಹಸುಗಳನ್ನು ತಿಂದಿತ್ತು.
ಇಂದು ಮತ್ತೊಂದು ಹಸುವನ್ನು ಹುಡುಕಿ ಇದೇ ಜಾಗಕ್ಕೆ ಚಿರತೆ ಬರುವ ನಿರೀಕ್ಷೆಯಿಂದ ಒಂದು ವಾರದಿಂದ ಬೋನನ್ನು ಇಟ್ಟು ಕಾಯುತ್ತಿದ್ದ ಅರಣ್ಯಾಧಿಕಾರಿಗಳ ಶ್ರಮ ಸಾರ್ಥಕವಾಗಿದೆ.
ಆನೇಕಲ್-ಕಲ್ಕೆರೆ ಅರಣ್ಯಾಧಿಕಾರಿಗಳು ಚಿರತೆಯನ್ನು ರಕ್ಷಿಸಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಒಪ್ಪಿಸುವ ಯೋಜನೆಯಲ್ಲಿದ್ದಾರೆ.