ಆನೇಕಲ್: ರೌಡಿಶೀಟರ್ ನೇಪಾಳಿ ಮಂಜನ ಭೀಕರ ಹತ್ಯೆ

Update: 2025-03-31 23:07 IST
ಆನೇಕಲ್: ರೌಡಿಶೀಟರ್ ನೇಪಾಳಿ ಮಂಜನ ಭೀಕರ ಹತ್ಯೆ
  • whatsapp icon

ಆನೇಕಲ್: ರೌಡಿಶೀಟರ್ ಮಂಜ ಯಾನೆ ನೇಪಾಳಿ ಮಂಜನನ್ನ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ರವಿವಾರ ರಾತ್ರಿ ನಡೆದಿದೆ. ತಾಲೂಕಿನ ಹೆಬ್ಬಗೋಡಿ-ಗೊಲ್ಲಹಳ್ಳಿ ಮುಖ್ಯ ರಸ್ತೆಯ ನಿರ್ಜನ ಪ್ರದೇಶದಲ್ಲಿ ಹೊಂಚು ಹಾಕಿ ಕೊಲೆಗೈಯ್ಯಲಾಗಿದೆ.

ಲಾಂಗು ಮಚ್ಚುಗಳಿಂದ ತಲೆ, ಹೊಟ್ಟೆ, ಎದೆ ಕೈಗೆ ಹಲ್ಲೆ ನಡೆಸಿ ದುಷ್ಕರ್ಮಿಗಳು ಕೊಲೆಗೈದಿದ್ದಾರೆ. 

ಇನ್ನು ಕೊಲೆಯಾದ ನೇಪಾಳಿ ಮಂಜ ಇತ್ತೀಚೆಗೆ ಕುಟುಂಬ ಸಮೇತ ಕುಣಿಗಲ್‍ಗೆ ಶಿಫ್ಟ್ ಆಗಿದ್ದ. ಯುಗಾದಿ ಹಬ್ಬ ಹಿನ್ನೆಲೆ ಸ್ನೇಹಿತರ ಜೊತೆ ಪಾರ್ಟಿ ಮಾಡಲು ಊರಿಗೆ ಬಂದಿದ್ದು, ರಾತ್ರಿ 10:45 ರ ಸುಮಾರಿಗೆ ಕೊಲೆ ನಡೆದಿದೆ ಎನ್ನಲಾಗಿದೆ.

ಪರಿಚಿತರಿಂದಲೇ ಕೊಲೆಯಾಗಿರುವ ಶಂಕೆ ಇದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ ಬಾಬಾ ತಿಳಿಸಿದ್ದಾರೆ.

ಎರಡು ಕೊಲೆ ಸೇರಿದಂತೆ ಕೊಲೆ ಯತ್ನ, ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ನೇಪಾಳಿ ಮಂಜ ಪ್ರಮುಖ ಆರೋಪಿಯಾಗಿದ್ದ. ಎರಡು ಬಾರಿ ಗೂಂಡಾ ಕಾಯ್ದೆ ಅಡಿ ಆತನನ್ನು ಬಂಧಿಸಲಾಗಿತ್ತು. ಕಳೆದ ಚುನಾವಣೆ ವೇಳೆ ಗಡಿಪಾರು ಕೂಡ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ಕೈದು ಮಂದಿ ಸ್ನೇಹಿತರ ಜೊತೆಯಿದ್ದ ಮಂಜನನ್ನು ಎರಡು ಬೈಕ್ ಗಳಲ್ಲಿ ಬಂದು ಏಕಾಏಕಿ ಮಂಜನ ಮೇಲೆ ದಾಳಿ ನಡೆಸಿದ್ದರು. ದಾಳಿಗೆ ಹೆದರಿ ಸ್ನೇಹಿತರು ಪರಾರಿಯಾಗಿದ್ದು ನೇಪಾಳಿ ಮಂಜನೊಬ್ಬನೇ ಹಂತಕರ ಕೈಗೆ ಸಿಕ್ಕಿ ಬಿದ್ದಿದ್ದ ಎನ್ನಲಾಗಿದೆ.

ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ, ಶ್ವಾನದಳ, ಸೋಕೋ ಟೀಮ್ ಭೇಟಿ ನೀಡಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News