ವಿದ್ಯಾರ್ಥಿಗಳಿಗೆ ಉದ್ದಿಮೆದಾರರಾಗಲು ಮಾರ್ಗದರ್ಶನ ಅಗತ್ಯ: ಜಯರಾಮ್ ತಿಮ್ಮಯ್ಯ

Update: 2024-09-10 02:26 GMT

ಬೆಂಗಳೂರು: ಎಲ್ಲಾ ಕ್ಷೇತ್ರದಲ್ಲೂ ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿದ್ದು, ವಿದ್ಯಾರ್ಥಿಗಳಲ್ಲಿ ಆವಿಷ್ಕಾರ ಮತ್ತು ಉದ್ದಿಮೆದಾರರಾಗುವ ಬಯಕೆ ಮೂಡಲು ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ಜರ್ಮನ್ ಸಂಸ್ಥೆಯ ತಾಂತ್ರಿಕ ಸಲಹೆಗಾರ ಜಯರಾಮ್ ತಿಮ್ಮಯ್ಯ ತಿಳಿಸಿದ್ದಾರೆ.

ಸೋಮವಾರ ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಎಎಂಸಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್‌ನಲ್ಲಿ ಶಿಕ್ಷಣ ಸಚಿವಾಲಯ, ಎಐಸಿಟಿಇ(ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಶನ್), ಮಿನಿಸ್ಟ್ರಿ ಆಫ್ ಸ್ಕೂಲ್ ಇನ್ನೋವೇಶನ್ಸ್ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ನಾವೀನ್ಯತೆ, ವಿನ್ಯಾಸ ಮತ್ತು ಉದ್ಯಮಶೀಲತೆ ಕುರಿತು ಎರಡು ದಿನಗಳ ಕಾಲ ನಡೆದ ವಿಶೇಷ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ತಂತ್ರಜ್ಞಾನ ಹೆಚ್ಚು ಅಭಿವೃದ್ಧಿ ಹೊಂದಿದೆ. ನಾವು ಅಂತರ್ಜಾಲಕ್ಕೆ ಕೃತಜ್ಞತೆ ಸಲ್ಲಿಸಬೇಕು. ಏಕೆಂದರೆ ಯಾವುದೇ ಸ್ಥಳ ಎನ್ನುವುದನ್ನು ಲೆಕ್ಕಿಸದೆ ಎಲ್ಲರಿಗೂ ತಂತ್ರಜ್ಞಾನವನ್ನು ಪರಿಚಯಿಸುವ ಮಹತ್ವದ ಕಾರ್ಯವನ್ನು ಅಂತರ್ಜಾಲ ಮಾಡುತ್ತಿದೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಂತ್ರಜ್ಞಾನ ಬಳಕೆಯ ಜೊತೆಗೆ ಇತ್ತೀಚಿನ ಅಭಿವೃದ್ಧಿಗಳನ್ನು ಅರಿಯುವ ಮೂಲಕ ತಮ್ಮ ಕ್ರಿಯಾಶೀಲತೆಯನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಿದ್ದಾರೆ ಎಂದರು.

ಯೋಗ, ನ್ಯಾಚುರೋಪತಿ ಮತ್ತು ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಆರ್.ರಂಗನಾಥ್ ಮಾತನಾಡಿ, ಶೈಕ್ಷಣಿಕ ಕಲಿಕೆ ಮತ್ತು ಉದ್ಯಮದ ಬೇಡಿಕೆಗಳ ನಡುವಿನ ಸಂಪರ್ಕ ಕಡಿತದಿಂದಾಗಿ ಉದ್ಯೋಗದ ಸಮಸ್ಯೆಗಳು ಎದುರಾಗುತ್ತಿವೆ. ಹಾಗಾಗಿ ಅದಕ್ಕೆ ಬೇಕಾದ ತರಬೇತಿ ನೀಡಬೇಕು. ವಿಶೇಷವಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್‌ಗಳನ್ನು ಪ್ರೋತ್ಸಾಹಿಸುವುದರಿಂದ ಅಂತರವನ್ನು ಕಡಿಮೆ ಮಾಡಬಹುದು. ಸರಕಾರಿ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ನಿರುದ್ಯೋಗವನ್ನು ಕಡಿಮೆ ಮಾಡಬಹುದು ಎಂದರು.

ಕಾರ್ಯಕ್ರಮದಲ್ಲಿ ಎಎಂಸಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ.ಕೆ.ಆರ್.ಪರಮಹಂಸ ಮತ್ತು ಎಎಂಸಿ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷ ರಾಹುಲ್ ಕಲ್ಲೂರಿ, ಎಎಂಸಿ ಕಾಲೇಜಿನ ಪ್ರಾಂಶುಪಾಲ ಡಾ.ಕುಮಾರ್ ಕೆ., ಎಎಂಸಿ ಸಮೂಹ ಸಂಸ್ಥೆಗಳ ಶೈಕ್ಷಣಿಕ ಮತ್ತು ಆಡಳಿತ ವಿಭಾಗದ ನಿರ್ದೇಶಕ ಡಾ.ಮೋಹನ್ ಬಾಬು ಜಿ.ಎನ್. ಸೇರಿ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News