ದೊಡ್ಡಬಳ್ಳಾಪುರ | ಅಪರಿಚತ ವಾಹನ ಢಿಕ್ಕಿ: ತಾಯಿ ಮೃತ್ಯು, ಮಗು ಗಂಭೀರ
Update: 2024-12-04 13:37 GMT
ದೊಡ್ಡಬಳ್ಳಾಪುರ : ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಚಾಲಕ ಪರಾರಿಯಾಗಿದ್ದು, ತಾಯಿ ಮೃತಪಟ್ಟಿದ್ದರೆ, ಮಗುವಿಗೆ ಗಂಭೀರ ಗಾಯವಾಗಿರುವಂತಹ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದೊಡ್ಡಬಳ್ಳಾಪುರದ ಹೊರವಲಯದ ನಂದಿಮೋರಿ ಬಳಿ ಘಟನೆ ನಡೆದಿದ್ದು, ನಗರದ ಪಾಲನಜೋಗಹಳ್ಳಿ ನಿವಾಸಿ ಭಾನುಪ್ರಿಯ (25) ಮೃತರು ಎಂದು ಗುರುತಿಸಲಾಗಿದೆ. ಮನೋಜ್ (4) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬುಧವಾರ ಶಾಲೆಯಿಂದ ಮಗುವನ್ನು ವಾಪಸ್ ಮನೆಗೆ ಕರೆದುಕೊಂಡು ಬರುವ ವೇಳೆ ದುರ್ಘಟನೆ ನಡೆದಿದೆ. ತಲೆಗೆ ತೀವ್ರ ಪೆಟ್ಟಾಗಿ ರಕ್ತ ಸಾವ್ರದಿಂದಾಗಿ ತಾಯಿ ಭಾನುಪ್ರಿಯ ಸಾವನ್ನಪ್ಪಿದರೆ, ಮನೋಜ್ ತಲೆಗೆ ಗಂಭೀರ ಗಾಯವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.