ಮಗನಿಗೆ ತಮ್ಮ ಶಾಲೆಯಲ್ಲಿ ಸೀಟು ಕೇಳಲು ವಿಜಯಲಕ್ಷ್ಮಿ ದರ್ಶನ್ ಭೇಟಿ : ಡಿ.ಕೆ.ಶಿವಕುಮಾರ್

Update: 2024-07-24 13:15 GMT

ಬೆಂಗಳೂರು: “ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ನಮ್ಮ ಶಾಲೆಯಲ್ಲಿ ಮಗನಿಗೆ ಸೀಟು ಸಂಬಂಧ ನನ್ನನ್ನು ಭೇಟಿ ಮಾಡಿದ್ದರು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಬುಧವಾರ ಸದಾಶಿವನಗರದ ತಮ್ಮ ನಿವಾಸಕ್ಕೆ ವಿಜಯಲಕ್ಷ್ಮಿ ಭೇಟಿ ಬಗ್ಗೆ ಸ್ಪಷ್ಟಣೆ ನೀಡಿದ ಶಿವಕುಮಾರ್, ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿ ಪುತ್ರ ಈ ಮೊದಲು ನಮ್ಮ ಶಾಲೆಯಲ್ಲಿ ಓದುತ್ತಿದ್ದರು. ಕಾರಣಾಂತರಗಳಿಂದ ನಮ್ಮ ಶಾಲೆ ತೊರೆದು ಬೇರೆ ಶಾಲೆ ಸೇರಿದ್ದರು. ಇದೀಗ ಪುನಃ ನಮ್ಮ ಶಾಲೆಗೆ ಸೇರಿಸಿಕೊಳ್ಳುವಂತೆ ಮನವಿ ಮಾಡಲು ಬಂದಿದ್ದರು. ನಮ್ಮ ಶಾಲೆಯ ಪ್ರಾಂಶುಪಾಲರು ಪ್ರವೇಶ ಅವಕಾಶ ನಿರಾಕರಿಸಿದ್ದರಿಂದ ನನ್ನ ಬಳಿ ಸೀಟು ಕೇಳಲು ಬಂದಿದ್ದರು ಎಂದು ವಿವರಣೆ ನೀಡಿದರು.

ಶಾಲೆಯ ದಾಖಲಾತಿಗೆ ನಿಯಮಾವಳಿಗಳಿವೆ. ನಾನು ಶಾಲೆಗೆ ಭೇಟಿ ನೀಡುತ್ತಿಲ್ಲ. ಆಡಳಿತ ಜವಾಬ್ದಾರಿಯನ್ನು ಮಕ್ಕಳಿಗೆ ವಹಿಸಿದ್ದೇನೆ. ವಿಜಯಲಕ್ಷ್ಮಿ ಪುತ್ರನ ಭವಿಷ್ಯದ ದೃಷ್ಟಿಯಿಂದ ಬಂದಿದ್ದರು. ಜತೆಗೆ ನಮ್ಮ ಶಾಲೆಯ ಪಕ್ಕದಲ್ಲೇ ಅವರ ನಿವಾಸವಿದೆ. ನಾನು ಆ ಮಗುವಿಗೆ ಒಳ್ಳೆಯದಾಗಲಿ ಎಂದು ಪ್ರಾಂಶುಪಾರನ್ನು ಭೇಟಿ ಮಾಡಲು ಹೇಳಿದ್ದೇನೆ ಎಂದು ಶಿವಕುಮಾರ್ ತಿಳಿಸಿದರು.

ನಾವು ಸಾರ್ವಜನಿಕ ಜೀವನದಲ್ಲಿದ್ದೇವೆ. ನನ್ನ ಭೇಟಿ ಮಾಡಲು ಬಂದವರನ್ನು ಬೇಡ ಎಂದು ಹೇಗೆ ನಿರಾಕರಣೆ ಮಾಡಲಿ? ಅಲ್ಲದೆ, ನಮ್ಮ ಶಾಲೆಯ ಪಕ್ಕದಲ್ಲೇ ಅವರ ಮನೆಯಿದೆ. ನಮ್ಮ ಲೋಕಸಭಾ ಕ್ಷೇತ್ರದಲ್ಲೇ ಅವರ ಮನೆಯಿದೆ. ನನ್ನನ್ನು ಭೇಟಿ ಮಾಡಲು ನೂರಾರು ಜನ ಬಂದಿದ್ದಾರೆ. ಭೇಟಿಗೆ ನಿರಾಕರಿಸಿದರೆ ಶಿವಕುಮಾರ್ ದುರಹಂಕಾರಿ, ಭೇಟಿ ಮಾಡದೆ ತೆರಳಿದರು ಎನ್ನುತ್ತೀರಿ. ಸಾರ್ವಜನಿಕ ಜೀವನದಲ್ಲಿದ್ದಾಗ ಸಹಾಯ ಕೇಳಿಕೊಂಡು ನನ್ನನ್ನು ಭೇಟಿ ಮಾಡುವುದು ನನ್ನ ಕರ್ತವ್ಯ ಎಂದು ಅವರು ಹೇಳಿದರು.

‘ಆ ಹೆಣ್ಣುಮಗಳಿಗೆ ತನ್ನ ಮಗನ ಶಿಕ್ಷಣದ ಬಗ್ಗೆ ಕಾಳಜಿಯಿದೆ. ಎಲ್ಲ ಮಕ್ಕಳು ಒಂದೇ ಅಲ್ಲವೇ? ಅವರಿಗೆ ಮಗನ ಶಿಕ್ಷಣದ ಬಗ್ಗೆ ಇರುವ ಕಾಳಜಿ ನೋಡಿ ಸಂತೋಷವಾಯಿತು. ಬೇರೆ ಶಾಲೆಗೆ ಸೇರಿಸಿದರೆ ಮಾನಸಿಕವಾಗಿ ತೊಂದರೆಯಾಗಬಹುದು. ನಮ್ಮ ಶಾಲೆಗೆ ಸೇರಿಸಿದರೆ ಹತ್ತಿರದಲ್ಲೇ ಇರುವುದರಿಂದ ಹೋಗಿ ಬರಲು ಅನುಕೂಲ ಆಗುತ್ತದೆ. ಈ ಹಿಂದೆ ಪೋಷಕರ ಸಭೆಗೆ ಅವರನ್ನು ಕರೆಸಲಾಗಿತ್ತು. ಆ ವೇಳೆ ದರ್ಶನ್ ಬಂದಿದ್ದರು ಎಂದು ವಿವರಿಸಿದರು.

ಹಸ್ತಕ್ಷೇಪ ಮಾಡುವುದಿಲ್ಲ: ‘ನಿನ್ನೆ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿದ್ದ ವೇಳೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ನನ್ನನ್ನು ಭೇಟಿ ಮಾಡಲು ಬಂದಿದ್ದರು. ಎಲ್ಲೆಂದರಲ್ಲಿ ಭೇಟಿ ಮಾಡಲು ಸಾಧ್ಯವಿಲ್ಲ. ಮನೆಗೆ ಬಂದು ಭೇಟಿ ಮಾಡಲು ಸಮಯಾವಕಾಶ ನೀಡಿದ್ದೆ. ಬಹುಶಃ ನಟ ದರ್ಶನ್ ಪ್ರಕರಣದ ವಿಚಾರವಾಗಿ ಮಾತನಾಡಲು ಬರುತ್ತಾರೆಂದು ಭಾವಿಸಿದ್ದೆ. ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ತನಿಖೆ ನಡೆಯುತ್ತಿದೆ. ನಾವು ಯಾವುದೇ ಕಾರಣಕ್ಕೂ ವಿಚಾರಣೆ, ನ್ಯಾಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ಕಾನೂನಿದೆ. ಕಾನೂನಿನ ಚೌಕಟ್ಟಿನಲ್ಲಿ ಎಲ್ಲರೂ ಒಂದೇ. ಏನೂ ಬೇಕಾದರೂ ಆಗಬಹುದು’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News