ಬೆಂಗಳೂರು: ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸದೆ ನಿರ್ಲಕ್ಷ್ಯ ತೋರಿದ ಪೊಲೀಸರು; ಆರೋಪ

Update: 2024-07-19 07:15 GMT

ಬೆಂಗಳೂರು: ವಾಹನ ಅಪಘಾತಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸವಾರನನ್ನು ಕಾರಿನಲ್ಲಿ ಬಂದ ಪೊಲೀಸರು ನೋಡಿದರೂ ಆಸ್ಪತ್ರೆಗೆ ಸೇರಿಸದೇ ನಿರ್ಲಕ್ಷ್ಯ ತೋರಿದ ಘಟನೆ ಇಲ್ಲಿನ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಿವೇಣಿ ರಸ್ತೆಯಲ್ಲಿ ಜು.15ರ ರಾತ್ರಿ ಸಮಯದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಗಾಯಾಳು ಸವಾರನ ಕಿವಿಯಲ್ಲಿ ರಕ್ತ ಸೋರುತ್ತಿದ್ದು, ಗಂಭೀರ ಗಾಯವಾಗಿತ್ತು. ಸ್ಥಳದಲ್ಲಿ ಹೊಯ್ಸಳ ಸಿಬ್ಬಂದಿ ಗಸ್ತು ತಿರುಗಲು ಕಾರಿನಲ್ಲಿ ಬಂದಿದ್ದು, ಗಾಯಾಳು ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದರೂ ಪೊಲೀಸರು ಆಂಬುಲೆನ್ಸ್‌ಗಾಗಿ ಕಾಯುತ್ತಾ ನಿರ್ಲಕ್ಷ್ಯ ತೋರಿದ್ದಾರೆ.

ಹೊಯ್ಸಳ ವಾಹನದಲ್ಲಿ ಗಸ್ತು ತಿರುಗಲು ಬಂದ ಪೊಲೀಸರು ಈ ಎಲ್ಲ ದೃಶ್ಯವನ್ನು ನೋಡುತ್ತಾ ಮೂಕ ಪ್ರೇಕ್ಷಕರಂತೆ ನಿಂತುಕೊಂಡರೇ ಹೊರತು, ತಾವು ಬಂದಿದ್ದ ಸಾರ್ವಜನಿಕ ವಾಹನದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುವ ಯಾವುದೇ ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ ಎಂದು ಈ ಘಟನೆಯನ್ನು ನೋಡಿದ ಸ್ಥಳೀಯ ಸಾರ್ವಜನಿಕರು ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಂತರ ವ್ಯಕ್ತಿಯೊಬ್ಬರ ಖಾಸಗಿ ಕಾರಿನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆ ಸಂಬಂಧ ಯಶವಂತಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿರ್ಲಕ್ಷ್ಯ ತೋರಿದ ಪೊಲೀಸ್ ಸಿಬ್ಬಂದಿ ವಿರುದ್ಧ ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಘಟನೆಯ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ನೆಟ್ಟಿಗರಿಂದ ಪೊಲೀಸ್ ಇಲಾಖೆ‌ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

 



Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News