ಕೆಟಿಪಿಪಿ ಕಾಯ್ದೆಯ ಕಲಂ 4(ಜಿ) ವಿನಾಯಿತಿಗೆ ಕಡಿವಾಣ ; ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಸುತ್ತೋಲೆ

Update: 2024-03-21 14:47 GMT

ಎಲ್.ಕೆ.ಅತೀಕ್

ಬೆಂಗಳೂರು: ಟೆಂಡರ್ ಇಲ್ಲದೆ ನೇರವಾಗಿ ಸರಕು ಮತ್ತು ಸೇವೆಗಳ ಪೂರೈಕೆ ಹಾಗೂ ಕಾಮಗಾರಿಗಳ ಗುತ್ತಿಗೆ ನೀಡುವುದಕ್ಕೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ(ಕೆಟಿಪಿಪಿ) ಕಾಯ್ದೆಯ ಕಲಂ 4(ಜಿ) ಅಡಿ ವಿನಾಯಿತಿ ನೀಡುವ ಪ್ರವೃತ್ತಿಗೆ ರಾಜ್ಯ ಸರಕಾರದ ಆರ್ಥಿಕ ಇಲಾಖೆ ಕಡಿವಾಣ ಹಾಕಿದೆ.

ಈ ಸಂಬಂಧ ಮಾ.15ರಂದು ಸುತ್ತೋಲೆ ಹೊರಡಿಸಿರುವ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ವಾರ್ಷಿಕವಾಗಿ ಆಚರಿಸಲಾಗುವ ಮತ್ತು ಪೂರ್ವ ನಿರ್ಧರಿತವಾದಂತಹ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ರಾಜ್ಯೋತ್ಸವ, ಮಹನೀಯರ ಜಯಂತಿ, ದಸರಾ ಉತ್ಸವ, ಚಲನಚಿತ್ರೋತ್ಸವ ಮುಂತಾದ ಕಾರ್ಯಕ್ರಮಗಳ ಆಯೋಜನೆಗೆ ಅಗತ್ಯವಿರುವ ಸರಕು ಮತ್ತು ಸೇವೆಗಳನ್ನು ಕಡ್ಡಾಯವಾಗಿ ಟೆಂಡರ್ ಪ್ರಕ್ರಿಯೆ ಮೂಲಕವೆ ಸಂಗ್ರಹಣೆ ಮಾಡುವಂತೆ ಸೂಚಿಸಿದ್ದಾರೆ.

ಕ್ರಿಯಾ ಯೋಜನೆ, ಅಂದಾಜು ಅನುಮೋದನೆಯಾದ ಕೂಡಲೇ ನಿಗದಿತ ದಿನಾಂಕದಂದು ಪ್ರಸ್ತಾಪಿತ ಸರಕು, ಸೇವೆ ಲಭ್ಯವಾಗುವಂತೆ ಮುಂಚಿತವಾಗಿಯೆ ಟೆಂಡರ್ ಪ್ರಕ್ರಿಯೆ ಕೈಗೊಂಡು ಸಂಗ್ರಹಣೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಸಿವಿಲ್ ಕಾಮಗಾರಿಗಳಲ್ಲಿ ನೇರವಾಗಿ 4(ಜಿ) ವಿನಾಯಿತಿ ಮೂಲಕ ಗುತ್ತಿಗೆದಾರರಿಗೆ ಕಾಮಗಾರಿಯನ್ನು ವಹಿಸುವುದರಿಂದ ಸ್ಪರ್ಧಾತ್ಮಕ ದರಗಳಲ್ಲಿ ಸಿಗಬಹುದಾದ ಕಡಿಮೆ ದರಗಳ ಲಾಭದಿಂದ ಸರಕಾರ ವಂಚಿತವಾಗುವ ಸಾಧ್ಯತೆಯಿದೆ. ಆದುದರಿಂದ, ಇಂತಹ ಸಂಗ್ರಹಣೆಗಳಿಗೆ 4(ಜಿ) ವಿನಾಯಿತಿಗೆ ಪ್ರಸ್ತಾವನೆ ಸಲ್ಲಿಸುವಂತಿಲ್ಲ ಎಂದು ಅತೀಕ್ ಹೇಳಿದ್ದಾರೆ.

ಡಿಪಿಆರ್ ಸೇವೆಯನ್ನು ಟೆಂಡರ್ ಮೂಲಕವೇ ಪಡೆಯಬೇಕು. ಹಲವು ವರ್ಷಗಳಿಂದ ಟೆಂಡರ್ ಮೂಲಕ ಸಂಗ್ರಹಿಸಲಾಗುತ್ತಿರುವ ಸರಕು, ಸೇವೆಗಳ ಸಂಗ್ರಹಣಾ ಪ್ರಕ್ರಿಯೆಯನ್ನು ಏಕಾಏಕಿ ಬದಲಿಸಿ ನೇರವಾಗಿ ಸಂಗ್ರಹಿಸಲು 4(ಜಿ) ವಿನಾಯಿತಿ ಕೋರಿ ಪ್ರಸ್ತಾವನೆ ಸಲ್ಲಿಸುವಂತಿಲ್ಲ. ಸರಕಾರದ ಅಂಗ ಸಂಸ್ಥೆಗಳೆಂಬ ಕಾರಣಕ್ಕೆ ಸರಕು ಮತ್ತು ಸೇವೆಗಳನ್ನು ಅವುಗಳಿಂದ ಮಾತ್ರ ನೇರವಾಗಿ ಸಂಗ್ರಹಣೆ ಮಾಡಿಕೊಳ್ಳಲು 4(ಜಿ) ವಿನಾಯಿತಿಗೆ ಪ್ರಸ್ತಾವನೆ ಸಲ್ಲಿಸುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.

ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳಡಿಯಲ್ಲಿ ಘಟನೋತ್ತರವಾಗಿ 4(ಜಿ) ವಿನಾಯಿತಿ ನೀಡಲು ಅವಕಾಶವಿಲ್ಲ. ಕಾಮಗಾರಿ, ಕಾರ್ಯಕ್ರಮ, ಸರಬರಾಜು ಆರಂಭವಾದ ನಂತರ ಅಥವಾ ಮುಕ್ತಾಯವಾದ ನಂತರ ಯಾವುದೇ ವಿನಾಯಿತಿ ಪ್ರಸ್ತಾವನೆಗಳನ್ನು ಸಲ್ಲಿಸುವಂತಿಲ್ಲ. ಅನುದಾನ ಲಭ್ಯತೆ, ವಿನಾಯಿತಿ ಅವಶ್ಯಕತೆ ಮತ್ತು ತುರ್ತು ಅಗತ್ಯತೆಯನ್ನು ಪರಿಶೀಲಿಸಿ ಕಡ್ಡಾಯವಾಗಿ ಇಲಾಖಾ ಕಾರ್ಯದರ್ಶಿಯ ಮೂಲಕವೇ ವಿನಾಯಿತಿ ಪ್ರಸ್ತಾವನೆಗಳನ್ನು ಆರ್ಥಿಕ ಇಲಾಖೆಗೆ ಸಲ್ಲಿಸಬೇಕು ಎಂದು ಅತೀಕ್ ಹೇಳಿದ್ದಾರೆ.

ವಿನಾಯಿತಿಗೆ ಸಲ್ಲಿಸುವ ಪ್ರಸ್ತಾವನೆಯಲ್ಲಿ ಕಡ್ಡಾಯವಾಗಿ ಸಂಗ್ರಹಣೆಗಳನ್ನು ಯಾರಿಂದ/ಯಾವ ಸಂಸ್ಥೆಯಿಂದ, ಯಾವ ಅನುದಾನದಿಂದ, ಯಾವ ಅವಧಿಗೆ, ಯಾವ ಉದ್ದೇಶಕ್ಕಾಗಿ ದರ ಮತ್ತು ಒಟ್ಟು ಎಷ್ಟು ಮೊತ್ತದಲ್ಲಿ ಮತ್ತು ಈ ದರಗಳು ಸಮಂಜಸವಾಗಿವೆಯೇ ಎಂಬುದರ ಬಗೆಗಿನ ದೃಢೀಕರಣ ಹಾಗೂ ಟೆಂಡರ್ ಪ್ರಕ್ರಿಯೆ ಮೂಲಕ ಏಕೆ ಕೈಗೊಳ್ಳಲು ಸಾಧ್ಯವಿಲ್ಲ ಎಂಬುದರ ಕುರಿತು ಸಮರ್ಥನೆಯನ್ನು ನಮೂದಿಸಿ ಆಡಳಿತ ಇಲಾಖೆಯ ಸೂಕ್ತ ಶಿಫಾರಸ್ಸಿನೊಂದಿಗೆ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.

4(ಜಿ) ವಿನಾಯಿತಿ ನೀಡಿ ಹೊರಡಿಸಿದ ಅಧಿಸೂಚನೆಯಲ್ಲಿ ನಮೂದಿಸಿದ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಅದರಲ್ಲಿ ನಿಗದಿಪಡಿಸಿದ ಮೊತ್ತಕ್ಕೆ ಸೀಮಿತಗೊಳಿಸಿ ಕಾಮಗಾರಿ/ಕಾರ್ಯಕ್ರಮ/ಸರಬರಾಜು ಸೇವೆಯನ್ನು ಸಂಗ್ರಹಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಒಂದು ವೇಳೆ ವಿನಾಯಿತಿ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಅಥವಾ ವಿನಾಯಿತಿಯಲ್ಲಿ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚುವರಿ ಮೊತ್ತವನ್ನು ಭರಿಸಿದಲ್ಲಿ ಶಿಸ್ತು ಕ್ರಮಗಳಿಗೆ ಒಳಪಡುತ್ತದೆ. ಆದುದರಿಂದ, ಇಂತಹ ಪ್ರಕರಣಗಳು ಗಮನಕ್ಕೆ ಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ/ಸಂಬಂಧಪಟ್ಟ ಶಿಸ್ತು ಪ್ರಾಧಿಕಾರಕ್ಕೆ ವರದಿ ಮಾಡಬೇಕು ಮತ್ತು ಅಂತಹ ಅಧಿಕಾರಿಗಳ ಸೇವಾ ಪುಸ್ತಕದಲ್ಲಿ ನಮೂದಿಸುವಂತೆ ಅತೀಕ್ ಸೂಚಿಸಿದ್ದಾರೆ.

ಅತ್ಯಂತ ಅವಶ್ಯಕ ಮತ್ತು ತುರ್ತು ಸಂದರ್ಭಗಳಲ್ಲಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗದ ಪ್ರಕರಣಗಳಲ್ಲಿ ಮಾತ್ರ ವಿನಾಯಿತಿ ಕೋರಿ ಪ್ರಸ್ತಾವನೆಗಳನ್ನು ಸಲ್ಲಿಸಬಹುದು. ವಿನಾಯಿತಿ ಪ್ರಸ್ತಾವನೆಗಳ ಕುರಿತು ಸಂಬಂಧಪಟ್ಟ ಆಡಳಿತ ಇಲಾಖೆಯ ಕಾರ್ಯದರ್ಶಿಗಳು ವೈಯಕ್ತಿಕವಾಗಿ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಬೇಕು. ವಿನಾಯಿತಿಯ ಅಗತ್ಯದ ಕುರಿತು ಕಾರಣಗಳನ್ನು ಲಿಖಿತವಾಗಿ ದಾಖಲಿಸಬೇಕು. ವಿನಾಯಿತಿ ಪ್ರಸ್ತಾವನೆಯಲ್ಲಿನ ದರಗಳ ಸಮಂಜಸತೆಯನ್ನು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು/ಕಾರ್ಯದರ್ಶಿಗಳು ವೈಯಕ್ತಿಕವಾಗಿ ಪ್ರಮಾಣೀಕರಿಸಬೇಕು ಎಂದು ಎಲ್.ಕೆ.ಅತೀಕ್ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News