ಪಿಎಸ್ಸೈ ನೇಮಕಾತಿ | ನನ್ನ ಹೋರಾಟಕ್ಕೆ ನ್ಯಾಯ ಸಿಕ್ಕಿದೆ : ಸಚಿವ ಪ್ರಿಯಾಂಕ್ ಖರ್ಗೆ

Update: 2024-10-22 16:49 GMT

ಬೆಂಗಳೂರು : ‘ಹಿಂದಿನ ಬಿಜೆಪಿ ಸರಕಾರದ ಪಿಎಸ್ಸೈ ನೇಮಕಾತಿಯ ಬೃಹತ್ ಹಗರಣವನ್ನು ಬಯಲಿಗೆಳೆಯುವ ನನ್ನ ಮೊದಲ ಹೆಜ್ಜೆಯಿಂದಲೇ ಪ್ರತಿಭಾವಂತರಿಗೆ ನ್ಯಾಯ ದೊರೆಯುವ ವಿಶ್ವಾಸವಿತ್ತು, ನಮ್ಮ ಹೋರಾಟದಲ್ಲಿ ಬದ್ಧತೆಯೂ ಇತ್ತು. ಅದು ಇದೀಗ ಸಾಕಾರಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಮಂಗಳವಾರ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ‘ನಾವು ಈ ಹಗರಣವನ್ನು ಬಿಚ್ಚಿಟ್ಟಾಗ ಅಂದಿನ ಬಿಜೆಪಿ ಸರಕಾರದ ಗೃಹಸಚಿವರಾದಿಯಾಗಿ ಬಿಜೆಪಿ ನಾಯಕರೆಲ್ಲರೂ ಸದನದಲ್ಲೇ ‘ಹಗರಣ ನಡೆದೇ ಇಲ್ಲ’ ಎನ್ನುವ ಶತಮಾನದ ಹಸಿ ಸುಳ್ಳನ್ನು ಸತ್ಯದ ತಲೆಯ ಮೇಲೆ ಸುತ್ತಿಗೆಯಲ್ಲಿ ಹೊಡೆದಂತೆ ಹೇಳಿದ್ದರು. ಇಷ್ಟೂ ಸಾಲದೆಂಬಂತೆ, ನನ್ನ ಬಾಯಿ ಮುಚ್ಚಿಸಲು ಬಿಜೆಪಿಗರು ನಡೆಸಿದ ಕಸರತ್ತು ಒಂದೆರಡಲ್ಲ, ನನಗೆ ಸಿಐಡಿ ಪೊಲೀಸರ ಮೂಲಕ ಎರಡೆರಡು ಬಾರಿ ನೋಟಿಸ್ ನೀಡಿದ್ದರು, ಪ್ರಮುಖ ಆರೋಪಿ ಆರ್.ಡಿ.ಪಾಟೀಲನೊಂದಿಗೆ ನನ್ನ ಹೆಸರು ತಳುಕು ಹಾಕಲು ಯತ್ನಿಸಿದ್ದರು, ನನ್ನ ವಿರುದ್ಧ ಬಿಜೆಪಿ ನಾಯಕರು ಸಾಲುಗಟ್ಟಿ ನಿಂತು ತಮ್ಮ ಕೊಳಕು ನಾಲಿಗೆಯ ಮೂಲಕ ಯುದ್ಧ ಸಾರಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.

‘ಕಾನ್ವೆಂಟ್ ದಲಿತ್’ ಎಂಬ ಬಿರುದನ್ನೂ ಕೊಟ್ಟಿದ್ದರು. ‘ನೀರಿಗಿಳಿದ ಮೇಲೆ ಚಳಿಯ ಚಿಂತೆಯೇಕೆ’ ಎನ್ನುವಂತೆ ನ್ಯಾಯದ ಹೋರಾಟಕ್ಕೆ ಇಳಿದ ಮೇಲೆ ಬಿಜೆಪಿಗರ ದಾಳಿಗಳನ್ನು ಲೆಕ್ಕಿಸಲಿಲ್ಲ, ಲೆಕ್ಕಿಸುವ ಜಾಯಮಾನವೂ ನನ್ನದಲ್ಲ. ಇಂದು ನಮ್ಮ ಸರಕಾರ ನಡೆಸಿದ 545 ಪಿಎಸ್ಸೈ ಹುದ್ದೆಗಳ ಪ್ರಾಮಾಣಿಕ ನೇಮಕಾತಿಯೇ ಬಿಜೆಪಿಗರಿಗೆ ನಾನು ಕೊಡಬಹುದಾದ ಅತ್ಯುತ್ತಮ ಉತ್ತರ ಎಂದು ಭಾವಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

‘ಇಂದು ನಮ್ಮ ಸರಕಾರ ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ಮರುಪರೀಕ್ಷೆ ನಡೆಸಿ, ಅಂದು ಬಿಜೆಪಿ ಸರಕಾರ ಲೂಟಿಗೆ ಬಳಸಿಕೊಂಡಿದ್ದ ಅದೇ 545 ಪಿಎಸ್ಸೈ ಹುದ್ದೆಗಳಿಗೆ ಪ್ರತಿಭಾವಂತ ಅಭ್ಯರ್ಥಿಗಳನ್ನು ನಿಯಮಾನುಸಾರ, ನ್ಯಾಯಸಮ್ಮತವಾಗಿ ಆಯ್ಕೆ ಮಾಡಿದೆ. ಆಯ್ಕೆ ಪ್ರಕ್ರಿಯೆ ವಿಳಂಬವಾದರೂ ಪಾರದರ್ಶಕವಾಗಿರಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು. ಆಯ್ಕೆಯಾದ ಅಭ್ಯರ್ಥಿಗಳೆಲ್ಲರಿಗೂ ಅಭಿನಂದನೆಗಳು ಎಂದು ಅವರು ತಿಳಿಸಿದ್ದಾರೆ.

‘ಚುನಾವಣೆಯ ಪೂರ್ವದಲ್ಲಿ ನಾವು ನೀಡಿದ್ದ ಭರವಸೆಯಂತೆಯೇ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ಕೊಡಲಾಗಿದೆ, ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ. ಪಿಎಸ್ಸೈ ನೇಮಕಾತಿ ಪರೀಕ್ಷೆಯಲ್ಲಿ ವಿಫಲರಾದ ಅಭ್ಯರ್ಥಿಗಳು ನಿರಾಸೆಗೊಳ್ಳದೆ ತಮ್ಮ ಪ್ರಯತ್ನವನ್ನು ಮುಂದುವರೆಸಬೇಕು, ಪ್ರತಿಭೆಗೆ ತಕ್ಕ ಫಲ ಪಡೆಯುವ ವಿಫುಲ ಅವಕಾಶಗಳನ್ನು ಸರಕಾರ ಮಾಡಿಕೊಡಲಿದೆ. ಕಾಂಗ್ರೆಸ್ ಸರಕಾರ ಯುವ ಸಮುದಾಯದ ಜೊತೆಗಿದೆ. ನೊಂದವರಿಗೆ ನ್ಯಾಯ ನೀಡುವುದು, ಯುವಜನರಿಗೆ ಸುಭದ್ರ ಬದುಕು ರೂಪಿಸುವುದು ನಮ್ಮ ಆದ್ಯತೆ ಹಾಗೂ ಬದ್ಧತೆಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ಪ್ರಕಟಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News