ಬೆಂಗಳೂರು | ಕಟ್ಟಡ ದುರಂತ ಪ್ರಕರಣ : ಆರು ಮಂದಿ ಕೂಲಿ ಕಾರ್ಮಿಕರು ಮೃತ್ಯು, ಇಬ್ಬರು ವಶಕ್ಕೆ

Update: 2024-10-23 13:07 GMT

ಬೆಂಗಳೂರು: ಇಲ್ಲಿನ ಹೆಣ್ಣೂರಿನ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದ ಪರಿಣಾಮ ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೇರಿದ್ದು, ಘಟನೆ ಕುರಿತಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಿಹಾರ ಮೂಲದ ಕಾರ್ಮಿಕರಾದ ಅಮ್ರಾನ್(26), ತ್ರಿಪಾಲ್(35), ಸಾಹೀಲ್ (19), ಸತ್ಯರಾಜು(25), ಶಂಕರ್ ಮೃತಪಟ್ಟಿದ್ದು, ಮತ್ತೊಬ್ಬ ಕಾರ್ಮಿಕನ ಹೆಸರು ಸದ್ಯಕ್ಕೆ ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯಲ್ಲಿ ಜಗದೇವಿ(45), ರಶೀದ್(28), ನಾಗರಾಜು(25), ರಮೇಶ್ ಕುಮಾರ್(28), ಅಜಯ್ ಮತ್ತು ಹರ್ಮಾನ್(22) ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಹಲವು ಅವಘಡಗಳು ಸಂಭವಿಸುತ್ತಿರುವ ನಡುವೆಯೇ ನಿನ್ನೆ ಸಂಜೆ ಹೆಣ್ಣೂರಿನ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣವಾಗುತ್ತಿದ್ದ ಆರು ಅಂತಸ್ತಿನ ಕಟ್ಟಡ ನೋಡನೋಡುತ್ತಿದ್ದಂತೆಯೇ ಕುಸಿದು ಬೀಳುತ್ತಿದ್ದಂತೆಯೇ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದವರ ಚೀರಾಟ ಕೇಳಿ ಬಂದಿತ್ತು.

ಈ ಕಟ್ಟಡದಲ್ಲಿ ಬಿಹಾರ ಮತ್ತು ಉತ್ತರ ಕರ್ನಾಟಕ ಮೂಲದ 21 ಹೆಚ್ಚು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಸುದ್ದಿ ತಿಳಿಯುತ್ತಿದ್ದಂತೆಯೇ ತಕ್ಷಣ ಅಗ್ನಿಶಾಮಕ ಸಿಬ್ಬಂದಿ, ಎನ್‌ಡಿಆರ್‌ಎಫ್ ಪಡೆ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಾರ್ಮಿಕರ ರಕ್ಷಣಾ ಕಾರ್ಯದಲ್ಲಿ ತೊಡಗಿ 13 ಮಂದಿಯನ್ನು ರಕ್ಷಿಸಿದ್ದಾರೆ.

ಈ ವೇಳೆ ಇಬ್ಬರು ಕಾರ್ಮಿಕರ ಮೃತದೇಹವನ್ನು ಹಾಗೂ ಮಧ್ಯರಾತ್ರಿ ಮೂವರ ಮೃತದೇಹಗಳನ್ನು ಹಾಗೂ ಇಂದು ಮಧ್ಯಾಹ್ನ ಮತ್ತೊಬ್ಬ ಕಾರ್ಮಿಕನ ಮೃತದೇಹ ಹೊರತೆಗೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ವಿವರಿಸಿದರು.

ಎಫ್‍ಐಆರ್, ವಶಕ್ಕೆ: ಕಟ್ಟಡ ಕುಸಿತದ ಬಗ್ಗೆ ಕಟ್ಟಡದ ಮಾಲಕ ಮುನಿರಾಜು ರೆಡ್ಡಿ, ಗುತ್ತಿಗೆದಾರರಾದ ಮೋಹನ್ ರೆಡ್ಡಿ, ಏಳುಮಲೈ ವಿರುದ್ಧ ಹೆಣ್ಣೂರುಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿ, ತನಿಖೆ ಮುಂದುವರೆದಿದ್ದು ಭುವನರೆಡ್ಡಿ ಮತ್ತು ಮುನಿಯಪ್ಪ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕಳಪೆ ಕಾಮಗಾರಿ?: ಕಟ್ಟಡ ಬುಡಮೇಲಾಗಿ ಉರುಳಿಬಿದ್ದಿರುವುದು ಗಮನಿಸಿದರೆ ಕಳಪೆ ಕಾಮಗಾರಿಯ ಶಂಕೆ ವ್ಯಕ್ತವಾಗಿದ್ದು, ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ, ಈ ಜಾಗದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಮಾತ್ರ ಅನುಮತಿ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News