ಅನಧಿಕೃತವಾಗಿ IAS ಅಧಿಕಾರಿಯ ಸಿಡಿಆರ್ ಪಡೆದ ಆರೋಪ : ಮಾಜಿ IPS ಅಧಿಕಾರಿ, ಇನ್‍ಸ್ಪೆಕ್ಟರ್ ಸೇರಿ ಐವರ ವಿರುದ್ಧ ಪ್ರಕರಣ ದಾಖಲು

Update: 2024-05-25 16:17 GMT

ಬೆಂಗಳೂರು : ಕೌಟುಂಬಿಕ ವಿವಾದದಲ್ಲಿ ಅನಧಿಕೃತ ಸಿಡಿಆರ್ (ಕರೆ ವಿವರಗಳ ದಾಖಲೆ) ಪಡೆದ ಆರೋಪದಡಿ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಪಿಎಸ್‍ಐ ಸೇರಿದಂತೆ ಐವರ ವಿರುದ್ಧ ಇಲ್ಲಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ವರದಿಯಾಗಿದೆ.

ಐಎಎಸ್ ಅಧಿಕಾರಿ ಡಾ.ಆಕಾಶ್ ಎಸ್. ಎಂಬುವರು ನೀಡಿರುವ ದೂರಿನನ್ವಯ ಮಾಜಿ ಐಪಿಎಸ್ ಅಧಿಕಾರಿ ಸುರೇಶ್ ಟಿ.ಆರ್., ಹೆಬ್ಬಗೋಡಿ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಐಯ್ಯಣ್ಣ ರೆಡ್ಡಿ ಸೇರಿದಂತೆ ಐವರ ವಿರುದ್ಧ ಸೈಬರ್ ಕ್ರೈಂ ಠಾಣೆಯ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ದೂರಿನ ವಿವರ: ಕೌಟುಂಬಿಕ ವಿವಾದಕ್ಕೆ ಸಂಬಂಧಿಸಿದಂತೆ ಸುರೇಶ್ ಟಿ.ಆರ್. ಹಾಗೂ ಪ್ರಸ್ತುತ ಹೆಬ್ಬಗೋಡಿ ಠಾಣೆಯ ಇನ್‍ಸ್ಪೆಕ್ಟರ್ ಆಗಿರುವ ಐಯ್ಯಣ್ಣ ರೆಡ್ಡಿ ಸೇರಿ 2022ರ ಫೆಬ್ರವರಿಯಿಂದ 2023ರ ಜನವರಿಯವರೆಗಿನ ತಮ್ಮ ಕರೆಯ ವಿವರಗಳನ್ನು ಪಡೆದುಕೊಂಡಿದ್ದಾರೆ. ಆ ಮೂಲಕ ನನಗೆ ಕಿರುಕುಳ ನೀಡಲು, ಬೆದರಿಕೆ ಹಾಕಲು ಬಳಸಿಕೊಂಡಿದ್ದಾರೆ ಎಂದು ಐಎಎಸ್ ಅಧಿಕಾರಿ ಡಾ. ಆಕಾಶ್ ಎಸ್. ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯ ಹೆಬ್ಬಗೋಡಿ ಠಾಣೆಯ ಇನ್‍ಸ್ಪೆಕ್ಟರ್ ಆಗಿರುವ ಐಯ್ಯಣ್ಣ ರೆಡ್ಡಿಯವರ ವಿರುದ್ಧ ಈಗಾಗಲೇ ರೇವ್ ಪಾರ್ಟಿ ಪ್ರಕರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಚಾರ್ಜ್ ಮೆಮೊ ನೀಡಿದ್ದಾರೆ. ಅದರ ಬೆನ್ನಲ್ಲೇ ಅನಧಿಕೃತವಾಗಿ ಸಿಡಿಆರ್ ತೆಗೆದಿರುವ ಆರೋಪ ಕೇಳಿ ಬಂದಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News