ಬೆಂಗಳೂರು: 6,53,500 ರೂ. ಮೌಲ್ಯದ 1,307 ನಕಲಿ ನೋಟುಗಳ ಚಲಾವಣೆ; ಮೂವರ ಬಂಧನ

Update: 2023-07-31 18:46 GMT

ಬೆಂಗಳೂರು: ಕೇರಳ, ತಮಿಳುನಾಡು ರಾಜ್ಯಗಳಿಂದ ಖೋಟಾ ನೋಟುಗಳನ್ನು ತಂದು ನಗರದ ಕಾಟನ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಲಾವಣೆ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡ ಪಶ್ಚಿಮ ವಿಭಾಗದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ 6,53,500ರೂ. ಮೌಲ್ಯದ 500ರ ಮುಖಬೆಲೆಯ 1,307 ಖೋಟಾ ನೋಟುಗಳ ಜಪ್ತಿ ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.

ಸೋಮವಾರ ನಗರದ ಆಯುಕ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ತಮಿಳುನಾಡಿನ ಕರೂರಿನ ಶರವಣನ್(25) ಕೇರಳದ ನಿತಿನ್(24) ಹಾಗೂ ದೇವನ್ (25)ಬಂಧಿತರಾಗಿದ್ದು, ಈ ಮೂವರು ಆರೋಪಿಗಳು ವಿಚಾರಣೆಯಲ್ಲಿ ಫೇಕ್ ಕರೆನ್ಸಿ ತಮಿಳುನಾಡು ಹಾಗೂ ಮೋಟಾಕರ್ 93 ಎನ್ನುವ ಇನ್‍ಸ್ಟಾಗ್ರಾಮ್ ಖಾತೆಯಿಂದ ಖೋಟಾ ನೋಟು ವ್ಯವಹಾರವನ್ನು ನಡೆಸಿ ಜನನಿಬಿಡ ಪ್ರದೇಶಗಳಾದ ಮೆಜೆಸ್ಟಿಕ್, ಸಿಟಿ ರೈಲ್ವೆ ನಿಲ್ದಾಣ, ಕೆ.ಆರ್.ಮಾರ್ಕೆಟ್‍ನಲ್ಲಿ ಖೋಟಾ ನೋಟುಗಳನ್ನು ಚಲಾವಣೆ ಮಾಡಿರುವುದನ್ನು ಬಾಯ್ಬಿಟ್ಟಿದ್ದಾರೆ ಎಂದು ಬಿ.ದಯಾನಂದ ಹೇಳಿದರು.

ಖೋಟ ನೋಟನ್ನು ತಮಿಳುನಾಡಿನ ಮೂಲದ ಆರೋಪಿ ಶರವಣನ್, ಪಾಟ್ನಾ ಮೂಲದ ವ್ಯಕ್ತಿಯನ್ನು ಸಂಪರ್ಕಿಸಿ, ಬಿಹಾರಕ್ಕೆ ತೆರಳಿ ಆತನಿಂದ 25 ಸಾವಿರಕ್ಕೆ 1 ಲಕ್ಷ ರೂ. ಅನುಪಾತದಲ್ಲಿ 10 ಲಕ್ಷದವರೆಗೂ ಖೋಟ ನೋಟುಗಳನ್ನು ಪಡೆದು ಕೇರಳ, ಕರ್ನಾಟಕ ಹಾಗೂ ಆಂದ್ರಪ್ರದೇಶದ ಇತರರಿಗೆ 3ರಿಂದ 4 ಲಕ್ಷ ರೂ.ಗಳವರೆಗೆ ನೀಡಿದ್ದು, ಅಲ್ಲಿಂದ ಚಲಾವಣೆ ಮಾಡಲಾಗಿದೆ ಎಂದು ಬಿ.ದಯಾನಂದ ತಿಳಿಸಿದರು.

ಬಿಹಾರದ ಪಾಟ್ನಾ ಮೂಲದ ಖೋಟ ನೋಟು ನೀಡುವ ವ್ಯಕ್ತಿಯನ್ನು ಪತ್ತೆ ಮಾಡಲು ಡಿಸಿಪಿ ಲಕ್ಷ್ಮಣ ನಿಂಬರಗಿ ಅವರ ನೇತೃತ್ವದಲ್ಲಿ ತನಿಖೆ ಮುಂದುವರೆಸಲಾಗಿದ್ದು, ಕಾಟನ್ ಪೇಟೆ ಪೊಲೀಸ್ ಬಾಲರಾಜ್ ಜಿ ಮತ್ತವರ ಸಿಬ್ಬಂದಿ ಈ ಖೋಟಾ ನೋಟು ಜಾಲವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಬಿ.ದಯಾನಂದ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್, ಡಿಸಿಪಿ ಲಕ್ಷ್ಮಣ ನಿಂಬರಗಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News