ಪರಿಶಿಷ್ಟ ಜಾತಿ, ಪಂಗಡದ 916 ಬ್ಯಾಕ್‍ಲಾಗ್ ಹುದ್ದೆಗಳು ಭರ್ತಿಗೆ ಬಾಕಿ ಇವೆ :ಡಾ.ಎಚ್.ಸಿ.ಮಹದೇವಪ್ಪ

ಡಾ.ಎಚ್.ಸಿ.ಮಹದೇವಪ್ಪ
ಬೆಂಗಳೂರು : ಸರಕಾರದ ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 916 ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡುವುದು ಬಾಕಿಯಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಬುಧವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಅಬ್ಬಯ್ಯ ಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರಕಾರದ ವಿವಿಧ ಇಲಾಖೆ, ನಿಗಮ, ಮಂಡಳಿಗಳು, ವಿಶ್ವವಿದ್ಯಾಲಯಗಳು, ಸಹಕಾರಿ ಸಂಸ್ಥೆಗಳು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2001 ಹಾಗೂ 2001ರ ನಂತರದಲ್ಲಿ ಪರಿಶಿಷ್ಟ ಜಾತಿಯ 16,413 ಮತ್ತು ಪರಿಶಿಷ್ಟ ಪಂಗಡದ 4,963 ಸೇರಿದಂತೆ ಒಟ್ಟು 21,376 ಹುದ್ದೆಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.
ಈ ಹುದ್ದೆಗಳ ಪೈಕಿ ಇದುವರೆಗೂ ಪರಿಶಿಷ್ಟ ಜಾತಿಯ 15,286 ಮತ್ತು ಪರಿಶಿಷ್ಟ ಪಂಗಡದ 4,379 ಸೇರಿದಂತೆ ಒಟ್ಟು 19,665 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಕೆಲವು ಇಲಾಖೆ, ಸಂಸ್ಥೆಗಳು ಆರ್ಥಿಕ ಮುಗ್ಗಟ್ಟಿನಿಂದ ಮತ್ತು ಮುಚ್ಚಿರುವ ಕಾರಣ ಒಟ್ಟು 795 ಹುದ್ದೆಗಳನ್ನು ಭರ್ತಿ ಮಾಡಲು ವಿನಾಯಿತಿ ಕೋರಿದ್ದಾರೆ. ಉಳಿದ 916 ಹುದ್ದೆಗಳನ್ನು ಭರ್ತಿ ಮಾಡಲು ಬಾಕಿ ಇದೆ ಎಂದು ಮಹದೇವಪ್ಪ ಮಾಹಿತಿ ನೀಡಿದರು.
ಈ 916 ಹುದ್ದೆಗಳ ಪೈಕಿ ಉನ್ನತ ಶಿಕ್ಷಣ ಇಲಾಖೆಯಲ್ಲಿ 530, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ 185 ಮತ್ತು ಜಲಸಂಪನ್ಮೂಲ ಇಲಾಖೆಯಲ್ಲಿ 112 ಹುದ್ದೆಗಳು ಸೇರಿ ಒಟ್ಟು 827 ಹುದ್ದೆಗಳಿವೆ. ಉಳಿದ ಇಲಾಖೆಗಳಲ್ಲಿ 89 ಹುದ್ದೆಗಳಿವೆ ಎಂದು ಅವರು ಹೇಳಿದರು.
ಉನ್ನತ ಶಿಕ್ಷಣ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳು ಮತ್ತು ಅವುಗಳ ಅಧೀನದಲ್ಲಿರುವ ಅನುದಾನಿತ ಶಾಲಾ, ಕಾಲೇಜುಗಳಲ್ಲಿ ನಿಗದಿತ ಕಾರ್ಯಭಾರವಿಲ್ಲದಿರುವುದು ಮತ್ತು ಕೆಲವು ಸಂಸ್ಥೆಗಳು ಮುಚ್ಚಿರುತ್ತವೆ ಎಂಬ ಕಾರಣಗಳಿಂದ ಭರ್ತಿ ಮಾಡಲು ವಿಳಂಬವಾಗುತ್ತಿದೆ. ಜಲಸಂಪನ್ಮೂಲ ಇಲಾಖೆಯಲ್ಲಿ ಅಭ್ಯರ್ಥಿಗಳ ಶೈಕ್ಷಣಿಕ ದಾಖಲಾತಿ, ಪ್ರಮಾಣ ಪತ್ರಗಳ ಸಿಂಧುತ್ವ ಮತ್ತು ಪೊಲೀಸ್ ವರದಿ ಪಡೆಯಲು ಕ್ರಮ ವಹಿಸಲಾಗುತ್ತಿದ್ದು, ಶೀಘ್ರದಲ್ಲಿಯೆ ಭರ್ತಿ ಮಾಡುವ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ಮಹದೇವಪ್ಪ ಹೇಳಿದರು.
ಈ ಮಧ್ಯೆ ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಂಬಂಧ 2024ರ ಅ.28ರಂದು ಸಚಿವ ಸಂಪುಟ ಸಭೆಯ ನಿರ್ಣಯದಂತೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ಮುಂದಿನ ತೀರ್ಮಾನದವರೆಗೂ ಹೊರಡಿಸಬಾರದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ ಎಂದು ಅವರು ತಿಳಿಸಿದರು.
ಜ.24ರಂದು ನಡೆದ ಬ್ಯಾಕ್‍ಲಾಗ್ ಹುದ್ದೆಗಳ ಭರ್ತಿ ಕುರಿತ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಬ್ಯಾಕ್‍ಲಾಗ್ ಹುದ್ದೆಗಳನ್ನು ಬಹಳಷ್ಟು ವರ್ಷಗಳ ಹಿಂದೆಯೇ ಗುರುತಿಸಿರುವುದರಿಂದ ಈ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ವಿನಾಯಿತಿ ನೀಡುವಂತೆ ಕೋರಲು ಸಚಿವ ಸಂಪುಟದ ಮುಂದೆ ಮಂಡಿಸಲು ತೀರ್ಮಾನಿಸಲಾಗಿದೆ. ಅಲ್ಲದೇ, ಎಲ್ಲೆಲ್ಲಿ ಈ ರೀತಿ ಹುದ್ದೆಗಳು ಮಂಜೂರಾಗಿದ್ದೂ ಭರ್ತಿ ಮಾಡಲಾಗಿಲ್ಲವೋ ಅವುಗಳ ಮಾಹಿತಿ ಸಂಗ್ರಹಿಸಲು ಐದು ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಮಹದೇವಪ್ಪ ಹೇಳಿದರು.