ಐದು ವರ್ಷ ನಾನೇ ಮುಖ್ಯಮಂತ್ರಿ : ಸಿದ್ದರಾಮಯ್ಯ

ಬೆಂಗಳೂರು : ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದ ಘಟನೆ ಬುಧವಾರ ವಿಧಾನಸಭೆಯಲ್ಲಿ ಜರುಗಿತು.
ಭೋಜನ ವಿರಾಮದ ಬಳಿಕ ವಿಧಾನಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ಸದಸ್ಯರು ಧರಣಿ ನಡೆಸುತ್ತಿದ್ದ ವೇಳೆ ಅವರು ಮಾತನಾಡಿದರು.
ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಏನಾಯಿತು? ನಿಮ್ಮ ಧಮ್ಮು, ತಾಕತ್ತು ಎಲ್ಲಾ ಏನಾಯಿತು? ಎಂದು ಬಿಜೆಪಿ ಸದಸ್ಯರ ವಿರುದ್ಧ ಹರಿಹಾಯ್ದ ಮುಖ್ಯಮಂತ್ರಿ, ಐದು ವರ್ಷ ಅಲ್ಲ, ಇನ್ನೂ ಐದು ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ ಎಂದು ಹೇಳಿದರು.
ಈ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಆರ್.ಅಶೋಕ್, ನೀವು ಮೊದಲ ಸಲ ಮುಖ್ಯಮಂತ್ರಿಯಾಗಿದ್ದಾಗ ನನ್ನನ್ನು ಉದ್ದೇಶಿಸಿ ‘ಏ ಅಶೋಕ ಬರೆದುಕೊಳ್ಳಪ್ಪ, ನಾನೇ ಪರ್ಮನೆಂಟು ಎಂದು ಹೇಳಿದ್ರಿ. ಆದರೆ, ನಂತರ 2018ರ ಬಳಿಕ ಕಾಣದಂತೆ ಮಾಯವಾದನೋ ನಮ್ಮ ಶಿವಾ ಅಂತ ಕಾಣೆಯಾದಿರಿ. ಈಗ ಮತ್ತೆ ನಾನೇ ಬರುತ್ತೇನೆ ಎಂದು ಹೇಳುತ್ತಿದ್ದಿರಿ. ನಾನೇ ನಾನೇ ಎಂದು ಹೇಳಿದವರೂ ಯಾರೂ ಮುಖ್ಯಮಂತ್ರಿ ಸ್ಥಾನದಲ್ಲಿ ಉಳಿಯಲಿಲ್ಲ ಸರ್ ಎಂದು ಹೇಳಿದರು.
ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ಪೂರೈಸಲಿ ಎಂದು ನಾವು ಬಯಸುತ್ತೇವೆ. ಆದರೆ, ಐದು ವರ್ಷ ಅವರ ಸರಕಾರ ಇದ್ದರೆ ಅದೇ ಪುಣ್ಯ ಎಂದು ಅಶೋಕ್ ಹೇಳುತ್ತಿದ್ದಂತೆ, ಮಧ್ಯಪ್ರವೇಶ ಮಾಡಿದ ಮುಖ್ಯಮಂತ್ರಿ, ಈ ಐದು ವರ್ಷ ಅಲ್ಲರೀ, ಮತ್ತೆ ಮುಂದಿನ ಐದು ವರ್ಷವೂ ನಾವೇ ಅಧಿಕಾರಕ್ಕೆ ಬರುತ್ತೇವೆ. ನೀವು ಬಿಜೆಪಿಯವರು ಅಧಿಕಾರಕ್ಕೆ ಬರುವುದಿಲ್ಲ ಎಂದು ತಿರುಗೇಟು ನೀಡಿದರು.
ಮುಖ್ಯಮಂತ್ರಿ ಆಗಿ ನೀವೇ ಇರುತ್ತೀರಾ? ಎಂದು ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಕಿಚಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹೌದು ನಾನೇ ಮುಖ್ಯಮಂತ್ರಿಯಾಗಿ ಇರುತ್ತೇನೆ ಎಂದು ಹೇಳಿದರು.