ʼಆರೋಗ್ಯಕರ ಕೆಲಸ ಪ್ರತಿಯೊಬ್ಬ ಉದ್ಯೋಗಿಯ ಹಕ್ಕುʼ: ಐಟಿ ವಲಯದಲ್ಲಿ ಕೆಲಸದ ಸಮಯದ ಮಿತಿ ಜಾರಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ನೌಕರರಿಂದ ಧರಣಿ

Photo credit: thenewsminute.com
ಬೆಂಗಳೂರು: ದೈನಂದಿನ ಕೆಲಸದ ಸಮಯದ ಮಿತಿ ಜಾತಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್ನಲ್ಲಿ ಕರ್ನಾಟಕ ಸ್ಟೇಟ್ ಐಟಿ ಎಂಪ್ಲಾಯ್ಸ್ ಯೂನಿಯನ್ ನೇತೃತ್ವದಲ್ಲಿ ಐಟಿ ನೌಕರರು ಧರಣಿ ನಡೆಸಿದ್ದಾರೆ.
ಆರೋಗ್ಯಕರ ಕೆಲಸ-ಜೀವನ ಸಮತೋಲನ ಪ್ರತಿಯೊಬ್ಬ ಉದ್ಯೋಗಿಯ ಹಕ್ಕು ಎಂಬ ಘೋಷಣೆಯೊಂದಿಗೆ ಧರಣಿ ನಡೆಸಿದ ನೌಕರರು, ಯಾವುದೇ ಹೆಚ್ಚುವರಿ ಪರಿಹಾರವಿಲ್ಲದೆ ವಾರಾಂತ್ಯವೂ ಸೇರಿದಂತೆ ಅಧಿಕೃತ ಸಮಯವನ್ನು ಮೀರಿ ಕೆಲಸ ಮಾಡಲು ನೌಕರರನ್ನು ಒತ್ತಾಯಿಸಲಾಗುತ್ತದೆ. ಉದ್ಯೋಗಿಗಳು ಕೆಲಸದ ಸಮಯದ ನಂತರವೂ ಲಭ್ಯವಾಗುವಂತೆ ನಿರೀಕ್ಷಿಸಲಾಗುತ್ತದೆ. ಉದ್ಯಮಿಗಳ ಈ ನಿರಂತರ ಒತ್ತಡವು ಕಾರ್ಮಿಕರಿಗೆ ಗಂಭೀರ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿದೆ ಎಂದು ಧರಣಿನಿರತರು ತಿಳಿಸಿದರು.
ಐಟಿ ಕಾರ್ಮಿಕರ ಆರೋಗ್ಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಸಮಯದ ಮಿತಿಯನ್ನು ಜಾರಿಗೊಳಿಸಬೇಕು. ಕಾರ್ಮಿಕ ಕಾನೂನು ಉಲ್ಲಂಘನೆಗಳ ವಿರುದ್ಧ ಸರಕಾರ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶಗಳು) ಕಾಯ್ದೆಯಿಂದ ಐಟಿ ವಲಯಕ್ಕೆ ನೀಡಿರುವ ವಿನಾಯತಿಯನ್ನು ಕೊನೆಗೊಳಿಸಬೇಕು. ಸಂಪರ್ಕ ಕಡಿತಗೊಳಿಸುವ ಹಕ್ಕನ್ನು (ರೈಟ್ ಟು ಡಿಸ್ಕನೆಕ್ಟ್) ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಕೆಐಟಿಯು ಪ್ರಧಾನ ಕಾರ್ಯದರ್ಶಿ ಸುಹಾಸ್ ಅಡಿಗ, ಉಪಾಧ್ಯಕ್ಷೆ ರಶ್ಮಿ ಚೌಧರಿ, ಸೂರಜ್ ಮತ್ತಿತರರು ಉಪಸ್ಥಿತರಿದ್ದರು.