ಸರಕಾರದ ನಿರ್ದೇಶನ ಉಲ್ಲಂಘಿಸಿ ಆಸ್ತಿ ನೋಂದಣಿ ಮಾಡಿದರೆ ಶಿಸ್ತು ಕ್ರಮ: ಎಚ್ಚರಿಕೆ

PC | Grok
ಬೆಂಗಳೂರು : ಸರಕಾರದ ಸುತ್ತೋಲೆ ಹಾಗೂ ನಿರ್ದೇಶನಗಳನ್ನು ಉಲ್ಲಂಘಿಸಿ ಆಸ್ತಿ ನೋಂದಣಿಗೆ ಅವಕಾಶ ಇಲ್ಲ. ಆದರೆ, ಸರಕಾರದ ಸುತ್ತೋಲೆ ಹಾಗೂ ಕೇಂದ್ರ ಕಚೇರಿಯ ನಿರ್ದೇಶನಗಳನ್ನು ಉಲ್ಲಂಘಿಸಿ ಸ್ಥಿರಾಸ್ತಿಗಳನ್ನು ನೋಂದಾಯಿಸುವ ಉಪನೋಂದಣಾಧಿಕಾರಿಗಳ ವಿರುದ್ಧ ಕೆಸಿಎಸ್‍ಆರ್ ನಿಯಮಗಳಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಈ ಸಂಬಂಧ ಆದೇಶ ಹೊರಡಿಸಿದ್ದು, ರಾಜ್ಯಾದ್ಯಂತ ಎಲ್ಲ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಗ್ರಾಮ ಪಂಚಾಯತ್ ಅಧೀನದಲ್ಲಿನ ಸ್ವತ್ತುಗಳಿಗೆ ಕಡ್ಡಾಯವಾಗಿ ಇ-ಆಸ್ತಿ, ಇ-ಸ್ವತ್ತು ಬಳಸಿ ನೋಂದಣಿ ಪ್ರಕ್ರಿಯೆ ನಡೆಸಲು ಸೂಚಿಸಲಾಗಿದೆ. ಆದಾಗ್ಯೂ ಕೆಲ ಉಪನೋಂದಣಾಧಿಕಾರಿಗಳು ಇ-ಖಾತ ಇದ್ದಾಗ್ಯೂ ತಪ್ಪಾಗಿ ಅರ್ಥೈಸಿಕೊಂಡು, ಗೊಂದಲ ಸೃಷ್ಟಿ ಮಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ ಎಂದು ಉಲ್ಲೇಖಿಸಲಾಗಿದೆ.
ಆ ಮೂಲಕ ರಾಜ್ಯದಲ್ಲಿನ ಉಪನೋಂದಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳಿಗೆ ಕಡ್ಡಾಯವಾಗಿ ಇ-ತಂತ್ರಾಂಶದಿಂದ ನಿಶ್ಚಿತವಾದ ಇ-ಸ್ವತ್ತು ಹಾಗೂ ಇ-ಆಸ್ತಿಯನ್ನು ಇ-ತಂತ್ರಾಂಶದಿಂದ ಮಾಹಿತಿ ಪಡೆದು ‘ಎ' ಖಾತೆ ಅಥವಾ ‘ಬಿ' ಖಾತೆ ಇದ್ದರೂ ನೋಂದಣಿಗೆ ಸೂಚಿಸಲಾಗಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.