ಜನರ ಪ್ರಜ್ಞೆಯನ್ನು ರೂಪಿಸಲು ಅಂಬೇಡ್ಕರ್ ಜಗತ್ತು ಸಹಾಯಕ : ರಹಮತ್ ತರೀಕೆರೆ

Update: 2024-04-13 17:13 GMT

ಬೆಂಗಳೂರು: ‘ಅಂಬೇಡ್ಕರ್ ಜಗತ್ತು’ ಪುಸ್ತಕ ಮೂಲ ಆಶಯದೊಂದಿಗೆ ಅನುವಾದ ಮಾಡಲಾಗಿದ್ದು, ನಾಡಿನ ಜನರ ಪ್ರಜ್ಞೆಯನ್ನು ರೂಪಿಸಲು ಸಹಾಯಕವಾಗುತ್ತದೆ ಎಂದು ಚಿಂತಕ ಡಾ.ರಹಮತ್ ತರೀಕೆರೆ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರದ ಬೀಟೆಲ್ ಪುಸ್ತಕ ಮಳಿಗೆಯಲ್ಲಿ ಆಯೊಜಿಸಲಾಗಿದ್ದ ಜೀರುಂಡೆ ಪ್ರಕಾಶನದ ಮೊದಲ ಪುಸ್ತಕ ‘ಅಂಬೇಡ್ಕರ್ ಜಗತ್ತು’ ಕುರಿತು ಸಂವಾದ ಮತ್ತು 2ನೇ ಮುದ್ರಣದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡದಲ್ಲಿ ಅಂಬೇಡ್ಕರ್ ಕುರಿತು ಆರಾಧನ ಮತ್ತು ನಿರಾಕರಣೆ ಮಾಡುವ ಪುಸ್ತಕಗಳು ಹೆಚ್ಚಿವೆ. ಆದರೆ ಅಂಬೇಡ್ಕರ್ ಜಗತ್ತು ವಸ್ತುನಿಷ್ಠವಾಗಿ ಯಾವುದೇ ಭಾವಾವೇಶವಿಲ್ಲದೆ ಮುಖಾಮುಖಿಯಾಗಿದೆ ಎಂದು ತಿಳಿಸಿದರು.

ಪತ್ರಕರ್ತ ಇಂಧೂದರ ಹೊನ್ನಾಪುರ ಮಾತನಾಡಿ, ನಾವು ದುರಿತ ಕಾಲದಲ್ಲಿ ಇರುವುದರಿಂದ ತಪ್ಪಿತಸ್ತರು ಯಾರು ಎನ್ನುವ ಪ್ರಶ್ನೆ ಎದುರಾಗಿದೆ. ಆಳುವ ವರ್ಗವನ್ನು ಸದಾ ದೂಷಿಸುತ್ತೇವೆ. ಆದರೆ ನಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸಬೇಕಿದೆ. ಬಾಬಾ ಸಾಹೇಬ ಅಂಬೇಡ್ಕರ್ ರನ್ನು ಭಾವನಾತ್ಮಕವಾಗಿ ನೋಡುವಲ್ಲಿ ನಮ್ಮ ಶಕ್ತಿಯನ್ನು ಕುಂದಿಸುತ್ತಿದ್ದೇವೆ. ಆದರೆ ಅವರ ಹಾದಿಯಲ್ಲಿ ನಡೆಯುವಲ್ಲಿ ಸೊಲುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಚಿಂತಕ ಶ್ರೀಪಾದ ಭಟ್ ಮಾತನಾಡಿ, ಯಾಕೆ ಶೋಷಣೆ ನಡೆಯುತ್ತಿದೆ. ಹೇಗೆ ನಡೆಯುತ್ತಿದೆ ಎನ್ನುವುದು ಅಂಬೇಡ್ಕರ್ ಅವರ ಪ್ರಶ್ನೆಯಾಗಿತ್ತು. ಜಾತಿ ದೌರ್ಜನ್ಯ ಗೋಚರ ಮತ್ತು ಅಗೋಚರ ಎರಡೂ ರೀತಿಯಲ್ಲಿ ಇರುತ್ತದೆ. ಅಂಬೇಡ್ಕರ್ ಜಗತ್ತು ಪುಸ್ತಕವನ್ನು ಕಾಲಘಟ್ಟಕ್ಕೆ ತಕ್ಕ ಹಾಗೆ ವಿಸ್ತರಿಸಿಕೊಂಡು ಓದಬೇಕು ಎಂದು ಹೇಳಿದರು.

ಇದೇ ವೇಳೆ ಮೇಘನಾ ಹೋರಾಟದ ಗೀತೆಗಳನ್ನು ಹಾಡಿದರು. ಹೋರಾಟಗಾರ ಹುಲಿಕುಂಟೆ ಮೂರ್ತಿ, ಅಶ್ವಿನಿ ಓಬುಳೇಶ್, ಲೇಖಕ ವಿಕಾಸ್.ಆರ್.ಮೌರ್ಯಮ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News