ಬೆಂಗಳೂರು | ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ; ಆರೋಪಿಗಳ ಬಂಧನಕ್ಕೆ ಐದು ವಿಶೇಷ ತಂಡಗಳ ರಚನೆ
ಬೆಂಗಳೂರು : ಕೋಲ್ಕತ್ತಾದ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಮೇಲಿನ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ವರದಿಯಾಗಿದೆ.
ಆನೇಕಲ್‌ನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಯುವತಿ, ಆ.17ರ ಶನಿವಾರ ರಾತ್ರಿ ಸ್ನೇಹಿತರೊಂದಿಗೆ ಕೋರಮಂಗಲದ ಪಬ್‌ವೊಂದಕ್ಕೆ ಬಂದಿದ್ದಳು. ವಾಪಸ್ ಹೋಗುವಾಗ ಸ್ನೇಹಿತನ ಕಾರನ್ನು ಯುವತಿ ತಾನೇ ಚಲಾಯಿಸುವ ಭರದಲ್ಲಿ ಎಂಪೈರ್ ಜಂಕ್ಷನ್ ಬಳಿ ಅಪಘಾತವಾಗಿದೆ. ಈ ವೇಳೆ ಆಟೋ ಚಾಲಕರೊಂದಿಗೆ ವಾಗ್ವಾದವಾದಾಗ ಯುವತಿ ತಾನೇ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಳು. ಆದರೆ, ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಭಯದಿಂದ ಯುವತಿ ಸ್ಥಳದಿಂದ ನಡೆದುಕೊಂಡೇ ತೆರಳಿದ್ದಳು ಎಂದು ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ತಿಳಿಸಿದ್ದಾರೆ.
ಸ್ವಲ್ಪ ದೂರ ಹೋದ ಬಳಿಕ ದ್ವಿಚಕ್ರ ವಾಹನ ಸವಾರನೊಬ್ಬನ ಬಳಿ ಲಿಫ್ಟ್ ಕೇಳಿದ್ದಾಳೆ. ಆತ ಆಕೆಯನ್ನು ಬೊಮ್ಮನಹಳ್ಳಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಯುವತಿ ತನ್ನ ಮೊಬೈಲ್ ಫೋನ್‌ನಲ್ಲಿ ಎಸ್‌ಓಎಸ್ ಬಟನ್ ಒತ್ತಿದ್ದರಿಂದ ಆಕೆಯ ತಂದೆ ಹಾಗೂ ಸ್ನೇಹಿತರಿಗೆ ಅಲರ್ಟ್ ಕಾಲ್ ತಲುಪಿದೆ. ಬಳಿಕ ಆಕೆಯ ಸ್ನೇಹಿತರು ಸ್ಥಳಕ್ಕೆ ತಲುಪುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದಾನೆ.
ಅರೆ ಪ್ರಜ್ಞಾವಸ್ಥೆಯಲ್ಲಿ ಯುವತಿ ತನ್ನ ಸ್ನೇಹಿತರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಯುವತಿಯ ಮೇಲೆ ಲೈಂಗಿಕ ದೌರ್ಜನ್ಯವಾಗಿರುವುದನ್ನು ತಿಳಿದ ಆಸ್ಪತ್ರೆಯ ವೈದ್ಯರು ಸ್ಥಳೀಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಈ ಘಟನೆ ಸಂಬಂಧ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಮಾಹಿತಿ ನೀಡಿದ್ದಾರೆ.
ಗ್ಯಾಂಗ್ ರೇಪ್ ಪ್ರಯತ್ನ ನಡೆದಿರುವುದು ನಿಜ..!
ಬೆಂಗಳೂರಿನ ಎಚ್‌ಎಸ್‌ಆಆರ್ ಲೇಔಟ್‌ನಲ್ಲಿ ಅತ್ಯಾಚಾರ ಪ್ರಯತ್ನ ಆಗಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಸಂತ್ರಸ್ತ ಯುವತಿಯೇ ದೂರು ನೀಡಿದ್ದು, ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿವೆ. ಗ್ಯಾಂಗ್ ರೇಪ್ ಪ್ರಯತ್ನ ನಡೆದಿರುವುದು ನಿಜ. ವೈದ್ಯಕೀಯ ಪರೀಕ್ಷೆ ವರದಿ ಬಂದ ನಂತರವೇ ಈ ಬಗ್ಗೆ ಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಸದ್ಯ ಸಂತ್ರಸ್ತ ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
-ಡಾ.ಜಿ.ಪರಮೇಶ್ವರ್, ಗೃಹ ಸಚಿವ
ಐದು ತಂಡ ರಚಿಸಿ ಎಲ್ಲಾ ಆಯಾಮಗಳಲ್ಲೂ ತನಿಖೆ..!
ಈ ಪ್ರಕರಣ ಸಂಬಂಧ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸಂತ್ರಸ್ಥ ಯುವತಿಯ ಮನೆಯವರೊಂದಿಗೆ ಮಾತನಾಡಿ ಪ್ರಾಥಮಿಕ ಮಾಹಿತಿಗಳನ್ನು ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಐದು ವಿಶೇಷ ತಂಡಗಳನ್ನು ರಚಿಸಿ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಅತಿ ಶೀಘ್ರವೇ ಆರೋಪಿಯನ್ನು ಬಂಧಿಸುವ ವಿಶ್ವಾಸವಿದೆ.
-ರಮಣ್ ಗುಪ್ತಾ, ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು ಪೂರ್ವ ವಿಭಾಗ.