ಕೆಎಎಸ್ ಪರೀಕ್ಷೆ ಗೊಂದಲ | ಓಎಂಆರ್ ಶೀಟ್‍ನಲ್ಲಿ ತಪ್ಪಾಗಿ ನಮೂದಾದ ನೋಂದಣಿ ಸಂಖ್ಯೆ
ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು(ಕೆಪಿಎಸ್‍ಸಿ) ರವಿವಾರದಂದು ನಡೆಸಿದ ಕೆಎಎಸ್ ಗ್ರೂಪ್ ಎ ಮತ್ತು ಬಿ ಪರೀಕ್ಷೆಯಲ್ಲಿ ಗೊಂದಲ ಉಂಟಾಗಿದ್ದು, ವಿಜಯಪುರ ಮತ್ತು ಕೋಲಾರ ಪರೀಕ್ಷಾ ಕೇಂದ್ರಗಳಲ್ಲಿ ಓಎಂಆರ್ ಶೀಟ್‍ನಲ್ಲಿ ನೋಂದಣಿ ಸಂಖ್ಯೆಗಳ ತಪ್ಪುಗಳು ಕಂಡುಬಂದಿದೆ.
ಪರೀಕ್ಷೆಯಲ್ಲಿ ಗೊಂದಲ ಉಂಟಾದ ಬೆನ್ನಲ್ಲೇ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ನಿರಾಕರಿಸಿದ್ದರು. ಈ ನಡುವೆ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದು, ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಹೆಚ್ಚುವರಿ ಸಮಯ ನೀಡುವ ಭರವಸೆ ನೀಡಿದ್ದರು ಎಂದು ವರದಿಯಾಗಿದೆ.
ಓಎಂಆರ್ ಶೀಟ್‍ನಲ್ಲಿ ನೊಂದಣಿ ಸಂಖ್ಯೆ ಅದಲು-ಬದಲು ಆರೋಪ ಕೇಳಿಬಂದಿದ್ದು, ಪರೀಕ್ಷೆ ಬರೆಯದೆ ಪರೀಕ್ಷಾರ್ಥಿಗಳು ಹೊರ ಬಂದಿದ್ದಾರೆ. ಈಗಾಗಲೇ ಪ್ರಶ್ನೆ ಪತ್ರಿಕೆಯಲ್ಲಿನ ಗೊಂದಲ ಆಗಿದ್ದರಿಂದ ಕೆಪಿಎಎಸ್ ಮತ್ತೊಮ್ಮೆ ಪರೀಕ್ಷೆ ನಡೆಸಿದೆ. ಆದರೆ ಇದೀಗ ಅಂತಹ ಎಡವಟ್ಟು ಮಾಡಿದ್ದು, ಅಭ್ಯರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ 32 ಪರೀಕ್ಷಾ ಕೇಂದ್ರಗಳಲ್ಲಿ 12,741 ಪರೀಕ್ಷಾರ್ಥಿಗಳು ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಹಾಗೂ ಬಿ ಹುದ್ದೆಗಳಿಗಾಗಿ ಪರೀಕ್ಷೆ ಬರೆಯುತ್ತಿದ್ದರು. ಈ ಪೈಕಿ ನಗರದ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಎರಡು ಪರೀಕ್ಷಾ ಕೇಂದ್ರಗಳು ಮರಾಠಿ ಮಹಾವಿದ್ಯಾಲಯ ಹಾಗೂ ವಿಕಾಸ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳ ನೋಂದಣಿ ಸಂಖ್ಯೆ ಹಾಗೂ ಓಎಂಆರ್ ಶೀಟ್‍ನಲ್ಲಿನ ನಂಬರ್ ಅದಲು ಬದಲಾಗಿರುವುದು ಕಂಡು ಬಂದಿದೆ. ಇದನ್ನು ವಿರೋಧಿಸಿ ಸಿಕ್ಯಾಬ್ ಸಂಸ್ಥೆಯ ಪರೀಕ್ಷಾ ಕೇಂದ್ರಗಳಲ್ಲಿನ ಹಲವಾರು ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯದೆ ಹೊರ ಬಂದಿದ್ದಾರೆ ಎಂದು ವರದಿಯಾಗಿದೆ.
ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹಾಗೂ ಜಿಲ್ಲಾ ಪಂಚಾಯತಿ ಸಿಇಓ ರಿಶಿ ಆನಂದ ಆಗಮಿಸಿ, ಪರೀಕ್ಷಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು. ಪರೀಕ್ಷಾರ್ಥಿಗಳ ನೋಂದಣಿ ನಂಬರ್ ಹಾಗೂ ಓಎಂಆರ್ ಶೀಟ್‍ನಲ್ಲಿನ ನಂಬರ್ ಬದಲಾಗಿದೆ ಎಂದು ಕೆಪಿಎಸ್‍ಸಿ ಅಧಿಕಾರಿಗಳ ಜೊತೆಗೆ ಅವರು ಮಾತನಾಡಿದರು.
ಈ ವಿಚಾರವಾಗಿ ಪರೀಕ್ಷಾರ್ಥಿಗಳ ನೋಂದಣಿ ನಂಬರನ್ನು ಓಎಂಆರ್ ಶೀಟ್‍ನಲ್ಲಿ ಪ್ರತ್ಯೇಕವಾಗಿ ನೋಂದಾಯಿಸಲು ಕೆಪಿಎಸ್‍ಸಿ ಅಧಿಕಾರಿಗಳು ಸಲಹೆ ನೀಡಿದರು. ಓಎಂಆರ್ ಶೀಟ್‍ನಲ್ಲಿ ಪರೀಕ್ಷಾರ್ಥಿಗಳ ನೋಂದಣಿ ನಂಬರ್ ನಮೂದಿಸಲು ಸೂಚನೆ ನೀಡಿ ಪರೀಕ್ಷೆ ಬರೆಯುವಂತೆ ಅಭ್ಯರ್ಥಿಗಳ ಮನವೊಲಿಕೆ ಮಾಡಿದ್ದಾರೆ.
ಇನ್ನು ಕೋಲಾರದ ಪರೀಕ್ಷಾ ಕೇಂದ್ರದಲ್ಲೂ ಇದೇ ಎಡವಟ್ಟಾಗಿದೆ. ಪ್ರವೇಶ ಪತ್ರದ ಸಂಖ್ಯೆ, ಓಎಂಆರ್ ಸಂಖ್ಯೆ ಹೊಂದಾಣಿಕೆ ಆಗಿರಲಿಲ್ಲ. ಹೀಗಾಗಿ ಪರೀಕ್ಷಾ ಕೇಂದ್ರದಿಂದ ಹೊರಬಂದ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಪ್ರವೇಶ ಪತ್ರ, ಓಎಂಆರ್ ಶೀಟ್‍ನಲ್ಲಿ ಬೇರೆ ರಿಜಿಸ್ಟರ್ ನಂಬರ್ ಇದೆ. ಬೇರೆ ಬೇರೆ ರಿಜಿಸ್ಟರ್ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಪರೀಕ್ಷೆ ಬರೆಯಿರಿ ಇಲ್ಲವಾದರೆ ಬಿಡಿ ಎಂದು ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಪರೀಕ್ಷಾರ್ಥಿಗಳಿಗೆ ಧಮ್ಕಿ ಹಾಕಿದ ಆರೋಪ ಮಾಡಲಾಗಿದೆ ಎಂದು ವರದಿಯಾಗಿದೆ.