ಬೆಂಗಳೂರು | ಡೆತ್‍ನೋಟ್ ಬರೆದಿಟ್ಟು ಕೆಎಸ್‍ಡಿಎಲ್ ಅಧಿಕಾರಿ ಆತ್ಮಹತ್ಯೆ

Update: 2024-12-30 14:44 GMT

ಬೆಂಗಳೂರು: ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಗಮದ(ಕೆಎಸ್‍ಡಿಎಲ್) ಖರೀದಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರು ಡೆತ್‍ನೋಟ್ ಬರೆದಿಟ್ಟು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಅಮೃತ್ ಶಿರೂರು(42) ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಯಾಗಿದ್ದು, ಡಿ.28ರ ಸಂಜೆ 5ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕೆಎಸ್‍ಡಿಎಲ್‍ನ ಖರೀದಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಮೃತ್ ಅವರು, ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಘಟನೆ ಸಂಬಂಧ ಪರಿಶೀಲನೆ ನಡೆಸಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಮಾತನಾಡಿ, ಕೆಎಸ್‍ಡಿಎಲ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ದೂರು ಬಂದಿತ್ತು. ಮನೆ ಮಾಲಕ ಗಿರೀಶ್ ಎಂಬುವರು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದರು. ನಂತರ ಠಾಣೆ ಸಿಬ್ಬಂದಿ ಹೋಗಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ನಂತರ ಅವರ ಸಹೋದರನಿಗೆ ನೀಡಿದ್ದೇವೆ ಎಂದರು.

ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ಮೂಲದ ಮೃತ ಅಮೃತ್ ಶಿರೂರು ಅವರು 10 ವರ್ಷದಿಂದ ಕೆಎಸ್‍ಡಿಎಲ್‍ನಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಮೊದಲ ಮದುವೆಯ ಡಿವೋರ್ಸ್ ಬಳಿಕ ಮತ್ತೊಂದು ಮದುವೆ ಆಗಿತ್ತು. ಅದು ಕೂಡ ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದೆ. ಅದರ ಬಗ್ಗೆ ನಮಗೆ ಯಾವುದೇ ದಾಖಲಾತಿ ಸಿಕ್ಕಿಲ್ಲ. ಕೌಟುಂಬಿಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದು ನಮ್ಮ ಅನುಮಾನ. ಅವರು ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು ಎಂದು ಡಿಸಿಪಿ ಸೈದುಲು ಅಡಾವತ್ ಮಾಹಿತಿ ನೀಡಿದರು.

ಡೆತ್ ನೋಟ್‍ನಲ್ಲಿ ‘ಸಾವಿಗೆ ಯಾರೂ ಕಾರಣ ಅಲ್ಲ’ ಎಂದು ಬರೆಯಲಾಗಿದೆ..!

ಅಮೃತ್ ಶಿರೂರು ಅವರು ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಒಂದು ಡೆತ್‍ನೋಟ್ ಸಿಕ್ಕಿದೆ. ಅದರಲ್ಲಿ ‘ನನ್ನ ಸಾವಿಗೆ ಯಾರೂ ಕಾರಣ ಅಲ್ಲ’ ಎಂದು ಬರೆಯಲಾಗಿದೆ. ಡೆತ್ ನೋಟ್‍ನಲ್ಲಿ ಯಾವ ಅಧಿಕಾರಿ ಹೆಸರು ಕೂಡ ಉಲ್ಲೇಖ ಮಾಡಿಲ್ಲ, ‘ನನ್ನ ಕೆಲಸಕ್ಕೆ ನ್ಯಾಯ ಒದಗಿಸಲಾಗುತ್ತಿಲ್ಲ. ನನ್ನ ಜೀವನ ಜಿಗುಪ್ಸೆಯಾಗಿದೆ’ ಎಂದು ಮಾತ್ರ ಡೆತ್ ನೋಟ್‍ನಲ್ಲಿ ಉಲ್ಲೇಖಿಸಿದ್ದಾರೆ. ಘಟನಾ ಸ್ಥಳ ನೋಡಿದಾಗ ಯಾವುದೇ ರೀತಿಯ ಸಂಶಯ ಕಂಡು ಬಂದಿಲ್ಲ. ಇನ್ನೂ ವೈದ್ಯಕೀಯ ವರದಿ ಬರಬೇಕಿದೆ. ಅದರ ಆಧಾರದ ಮೇಲೆ ಈ ಪ್ರಕರಣದ ತನಿಖೆ ನಡೆಸುತ್ತೇವೆ ಎಂದು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News