ಬೆಂಗಳೂರು | ದ್ವಿಚಕ್ರ ವಾಹನ ಕದ್ದು ನಕಲಿ ದಾಖಲೆ ಸೃಷ್ಟಿಸಿ ಮಾರಾಟ : ಇಬ್ಬರ ಬಂಧನ, 25 ವಾಹನಗಳ ವಶ

Update: 2024-08-20 14:39 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಅವುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆನ್‍ಲೈನ್‍ನಲ್ಲಿ ಮಾರಾಟ ಮಾಡುತ್ತಿದ್ದ ಪ್ರಕರಣದಡಿ ಇಬ್ಬರು ಆರೋಪಿಗಳನ್ನು ಇಲ್ಲಿನ ವಿದ್ಯಾರಣ್ಯಪುರ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ರಾಘವೇಂದ್ರ ಹಾಗೂ ಸಾಯಿತೇಜ ಎಂಬುವರು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಇವರಿಂದ 25 ದ್ವಿಚಕ್ರ ವಾಹನಗಳು, 6 ಮೊಬೈಲ್ ಫೋನ್‍ಗಳು, 2 ಲ್ಯಾಪ್‍ಟಾಪ್‍ಗಳು ಹಾಗೂ ಒಂದು ಕಲರ್ ಪ್ರಿಂಟರ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಆಂಧ್ರ ಪ್ರದೇಶದ ಕಡಪ ಜಿಲ್ಲೆಗಳಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಗಳು, ಅವುಗಳನ್ನು ಹುಣಸಮಾರನಹಳ್ಳಿಯಲ್ಲಿರುವ ತಮ್ಮ ಮನೆಗೆ ತಂದು ಅಸಲಿ ಇಂಜಿನ್ ಹಾಗೂ ಚಾಸಿಸ್ ನಂಬರ್ ಗಳನ್ನು ಟ್ಯಾಂಪರ್ ಮಾಡುತ್ತಿದ್ದರು. ನಂತರ ಸರಿಹೊಂದುವ ನಕಲಿ ಆರ್‌ಸಿ ಕಾರ್ಡ್, ಇನ್ಸೂರೆನ್ಸ್, ನಂಬರ್ ಪ್ಲೇಟ್‍ಗಳನ್ನು ಸೃಷ್ಟಿಸುತ್ತಿದ್ದರು. ಆನ್‍ಲೈನ್‍ನಲ್ಲಿ ಹಾಗೂ ಕೆಲವೊಮ್ಮೆ ನೇರವಾಗಿ ಮಾರಾಟ ಮಾಡುತ್ತಿದ್ದರು. ಇತ್ತೀಚಿಗೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದರಿಂದ ಆರೋಪಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಿ ಬಂಧಿಸಿದ್ದು, ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News