ಬೆಂಗಳೂರು | ಮೂರು ಬೈಕ್‌ಗಳಿಗೆ ಢಿಕ್ಕಿ ಹೊಡೆದ ಕಾರು; ನಾಲ್ವರಿಗೆ ಗಾಯ

Update: 2023-11-13 07:19 GMT

ಬೆಂಗಳೂರು: ಕಾರೊಂದು ಮೂರು ಬೈಕ್‌ಗಳಿಗೆ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡಿರುವ ಘಟನೆ ರವಿವಾರ ನಗರದ ಹುಳಿಮಾವು ಪ್ರದೇಶದಲ್ಲಿ ವರದಿಯಾಗಿದೆ.

ಘಟನೆಯ ವೀಡಿಯೊ ಮತ್ತೊಂದು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ನಗರದ ಹುಳಿಮಾವು ಬಳಿಯ ಕಾಳೇನ ಅಗ್ರಹಾರದಲ್ಲಿ ಸಿಗ್ನಲ್‌ ಇದ್ದ ಕಾರಣ ವಾಹನಗಳು ನಿಂತಿವೆ. ಈ ವೇಳೆ, ಹಿಂದಿನಿಂದ ಬಂದ ಎಸ್‌ಯುವಿ ಕಾರಿನ ಚಾಲಕನ ನಿಯಂತ್ರಣ ತಪ್ಪಿದ್ದು, ಇದರಿಂದ ಈ ಸರಣಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. 

ಕಾರು ಮೂರು ಬೈಕ್‌ಗಳಿಗೆ ಢಿಕ್ಕಿ ಹೊಡೆದಿದ್ದು, ಬೈಕ್ ಸವಾರರು ಮತ್ತು ಹಿಂಬದಿ ಸವಾರರು ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ ನಾಲ್ವರು ಗಾಯಗೊಂಡಿದ್ದಾರೆ. ಸದ್ಯ  ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ಘಟನೆಯಲ್ಲಿ ಮೂರು ದ್ವಿಚಕ್ರ ವಾಹನಗಳು ಜಖಂಗೊಂಡಿವೆ ಎಂದು ತಿಳಿದು ಬಂದಿದೆ. 

ಘಟನೆ ಬಳಿಕ ಕಾರು ಚಾಲಕ ಪರಾರಿಯಾಗಿದ್ದು, ಆತನನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News