ಬೆಂಗಳೂರು | ಗುಂಡು ಹಾರಿಸಿ ಚಿನ್ನದಂಗಡಿ ದರೋಡೆಗೆ ಯತ್ನ ಪ್ರಕರಣ : ಆರೋಪಿಗಳ ಬಂಧನ

Update: 2024-03-20 12:33 GMT

ಬೆಂಗಳೂರು: ಚಿನ್ನದಂಗಡಿಯಲ್ಲಿ ಪಿಸ್ತೂಲ್‍ನಿಂದ ಗುಂಡು ಹಾರಿಸಿ ದರೋಡೆಗೆ ಯತ್ನಿಸಿದ್ದ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಇಲ್ಲಿನ ಕೊಡಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.

ಖಾನಾ ಶರ್ಮಾ(23), ಅಶು ಶರ್ಮಾ(27), ಪ್ರದೀಪ್ ಶರ್ಮಾ(37) ಹಾಗು ವಿಕಾಸ್ ಪಂಡಿತ್(32) ಎಂಬುವರನ್ನು ಬಂಧಿತರು ಎಂದು ಗುರುತಿಸಲಾಗಿದ್ದು, ಬಂಧಿತ ನಾಲ್ವರನ್ನು 13 ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಸೂರಜ್(30) ಎಂಬಾತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾ.14ರಂದು ಹಾಡಹಗಲೇ ಕೊಡಿಗೆಹಳ್ಳಿಯ ದೇವಿನಗರದ ಲಕ್ಷ್ಮೀ ಬ್ಯಾಂಕರ್ಸ್ ಆ್ಯಂಡ್ ಜ್ಯುವೆಲ್ಲರ್ಸ್ ಮಳಿಗೆಗೆ ಬಂದಿದ್ದ ಆರೋಪಿಗಳು ಮಾಲಕ ಮತ್ತು ಅಂಗಡಿ ಸಿಬ್ಬಂದಿಯನ್ನು ಬೆದರಿಸಿ ಚಿನ್ನ ಕದಿಯಲು ಯತ್ನಿಸಿದ್ದರು. ಆದರೆ ಮಾಲಕ ಮತ್ತು ಸಿಬ್ಬಂದಿಯ ಪ್ರತಿರೋಧದಿಂದ ಚಿನ್ನಾಭರಣ ಕದಿಯಲು ಸಾಧ್ಯವಾಗದಿದ್ದಾಗ ಪಿಸ್ತೂಲ್‍ನಿಂದ ಗುಂಡು ಹಾರಿಸಿ, ಪಿಸ್ತೂಲ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳು, ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಬೆರಳಚ್ಚು ಮಾದರಿ ಆಧರಿಸಿ ತನಿಖೆ ಆರಂಭಿಸಿದಾಗ ಆರೋಪಿಗಳು ಮಧ್ಯಪ್ರದೇಶ ಮೂಲದವರು ಹಾಗೂ ಈ ಹಿಂದೆ ಮಧ್ಯಪ್ರದೇಶದಲ್ಲೂ ಕೂಡ ಹತ್ತಾರು ಬಾರಿ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳ ಜಾಡು ಹಿಡಿದು ಹೊರಟ ಪೊಲೀಸರಿಗೆ ಮಧ್ಯಪ್ರದೇಶ ಗ್ವಾಲಿಯರ್‍ನಲ್ಲಿ ನಾಲ್ವರನ್ನು ಬಂಧಿಸಿದ್ದಾರೆ.

ಆರೋಪಿಗಳ ಪೈಕಿ ವಿಕಾಸ್ ಎಂಬಾತ ಈ ಹಿಂದೆಯೇ ಬೆಂಗಳೂರಿಗೆ ಬಂದು ಟೈಲ್ಸ್ ವರ್ಕ್ಸ್‌ ಗೆ ಸೇರಿಕೊಂಡಿದ್ದ. ಅದೇ ಸಂದರ್ಭದಲ್ಲಿ ಕೊಡಿಗೆಹಳ್ಳಿಯ ಚಿನ್ನಾಭರಣಗಳ ಮಳಿಗೆಯನ್ನು ಗುರುತಿಸಿಕೊಂಡಿದ್ದ ಎಂದು ಗೊತ್ತಾಗಿದೆ.

ನಂತರ ಕೆಲಸ ಬಿಟ್ಟು ತನ್ನ ಇಡೀ ತಂಡವನ್ನು ಬೆಂಗಳೂರಿಗೆ ಕರೆ ತಂದಿದ್ದ. ಆರೋಪಿಗಳು ಸಂಚು ರೂಪಿಸಿ ಮಳಿಗೆಯಲ್ಲಿ ದರೋಡೆಗೆ ಯತ್ನಿಸಿದ್ದರು. ಅದೇ ಸಂದರ್ಭದಲ್ಲಿ ಆರೋಪಿಗಳಲ್ಲಿ ಓರ್ವನಾದ ಆಶು ಪಂಡಿತ್ ಹಾರಿಸಿದ ಗುಂಡು ಸೂರಜ್‍ನ ಕುತ್ತಿಗೆ ಸೀಳಿತ್ತು. ಬಳಿಕ ಆತನ ಕುತ್ತಿಗೆಗೆ ಮಫ್ಲರ್ ಸುತ್ತಿಕೊಂಡು, ಕಂಟ್ರಿ ಮೇಡ್ ಪಿಸ್ತೂಲ್ ಅನ್ನು ಸ್ಥಳದಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಕೃತ್ಯದ ಸ್ಥಳದಿಂದ ಪರಾರಿಯಾದ ಬಳಿಕ ರೈಲು ಮಾರ್ಗದ ಮೂಲಕ ಆರೋಪಿಗಳು ಮಧ್ಯಪ್ರದೇಶಕ್ಕೆ ಪರಾರಿಯಾಗಿದ್ದರು. ಗಾಯಾಳು ಸೂರಜ್‍ನನ್ನು ಗ್ವಾಲಿಯರ್ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News