ಬೆಂಗಳೂರು | ಮನೆ ಮಾಲಕರು, ಬಾಡಿಗೆದಾರರಿಗೆ ವಂಚನೆ ಪ್ರಕರಣ : ದಂಪತಿ ಬಂಧನ
ಬೆಂಗಳೂರು: ನಗರದಲ್ಲಿ ಬಾಡಿಗೆಗೆ ಮನೆಗಳನ್ನು ಪಡೆದು ನಂತರ ಅದೇ ಮನೆಗಳನ್ನು ಇತರರಿಗೆ ಭೋಗ್ಯಕ್ಕೆ ನೀಡುವ ಮೂಲಕ ಹಲವರಿಗೆ ವಂಚಿಸಿದ್ದ ಪ್ರಕರಣದಡಿ ದಂಪತಿಯನ್ನು ಸಿಸಿಬಿಯ ಆರ್ಥಿಕ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ.
ಜಿಯೂ ಹೋಮ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪೆನಿ ನಡೆಸುತ್ತಿದ್ದ ಅಹ್ಮದ್ ಅಲಿ ಬೇಗ್ ಹಾಗೂ ಅವರ ಪತ್ನಿ ಮುಯಿದಾ ಸಮ್ದಾನಿ ಬಾನು ಬಂಧಿತ ಆರೋಪಿಗಳು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಜಿಯೂ ಹೋಮ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಪ್ರಾಪರ್ಟಿ ಮ್ಯಾನೇಜ್‍ಮೆಂಟ್ ಕಂಪೆನಿ ತೆರೆದಿದ್ದ ಆರೋಪಿಗಳು, ನಗರದ ಎಚ್.ಬಿ.ಆರ್ ಲೇಔಟ್‍ನಲ್ಲಿ ಕಚೇರಿ ಹೊಂದಿದ್ದರು.
ಖಾಲಿ ಇರುವ ಮನೆ, ಫ್ಲ್ಯಾಟ್‍ಗಳ ಮಾಲಕರನ್ನು ಮಧ್ಯವರ್ತಿಗಳ ಮೂಲಕ ಸಂಪರ್ಕಿಸುತ್ತಿದ್ದ ಆರೋಪಿಗಳು, ತಾವು ಬಾಡಿಗೆದಾರರನ್ನು ಹುಡುಕಿಕೊಡುವ ಮೂಲಕ ನಿರ್ವಹಣೆ ಮಾಡುವುದಾಗಿ ನಂಬಿಸುತ್ತಿದ್ದರು. ಬಾಡಿಗೆಗೆ ಎಂದು ಕರಾರು ಮಾಡಿಕೊಂಡು ಬಳಿಕ ಅವುಗಳನ್ನು ಬೇರೆಯವರಿಗೆ ಭೋಗ್ಯಕ್ಕೆ ನೀಡುತ್ತಿದ್ದರು.
ಒಂದೆರಡು ತಿಂಗಳುಗಳ ಬಳಿಕ ಮಾಲಕರಿಗೆ ಬಾಡಿಗೆ ನೀಡುತ್ತಿರಲಿಲ್ಲ. ಮಾಲಕರು ಮನೆ ಬಳಿ ಹೋಗಿ ನೋಡಿದಾಗ ಮನೆಯಲ್ಲಿರುವವರು ಭೋಗ್ಯಕ್ಕೆ ಪಡೆದಿರುವುದು ತಿಳಿಯುತ್ತಿತ್ತು. ಮನೆ ಮಾಲಕರು ಹಾಗೂ ಬಾಡಿಗೆದಾರರನ್ನು ಏಕಕಾಲಕ್ಕೆ ವಂಚಿಸುತ್ತಿದ್ದ ಜಿಯೂ ಹೋಮ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಸ್ಥಾಪಕ ಅಹ್ಮದ್ ಅಲಿ ಬೇಗ್, ನೂರ್ ಅಹ್ಮದ್ ಅಲಿ ಬೇಗ್, ಅಕ್ರಂ ಪಾಶಾ, ಅಬ್ಧುಲ್ ರಹೀಂ ಹಾಗೂ ಸೈಯ್ಯದ್ ಮತ್ತಿತರರ ವಿರುದ್ಧ ಎಪ್ರಿಲ್‍ನಲ್ಲಿ ಬಾಣಸವಾಡಿ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಪ್ರಕರಣ ಬಯಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದರು.
ವಂಚನೆಗೊಳಗಾದ ಮನೆಗಳ ಮಾಲಕರು, ಭೋಗ್ಯಕ್ಕೆ ವಾಸವಿದ್ದವರು ಸೇರಿದಂತೆ ನೂರಾರು ಜನರು ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜೂನ್‍ನಲ್ಲಿ ನಗರದ ಕ್ವೀನ್ಸ್ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದ್ದರು. ಬಳಿಕ ಸಿಸಿಬಿಯ ಆರ್ಥಿಕ ಅಪರಾಧ ದಳಕ್ಕೆ ಪ್ರಕರಣದ ತನಿಖೆಯನ್ನು ವರ್ಗಾಯಿಸಲಾಗಿತ್ತು.
ಸದ್ಯ ಸಿಸಿಬಿ ಅಧಿಕಾರಿಗಳು ಹೈದರಾಬಾದ್‍ನಲ್ಲಿದ್ದ ಅಹ್ಮದ್ ಅಲಿ ಬೇಗ್ ಹಾಗೂ ಆತನ ಪತ್ನಿ ಮುಯಿದಾ ಸಮ್ದಾನಿ ಬಾನು ಅವರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇನ್ನೂ ಕೆಲ ಆರೋಪಿಗಳಿಗಾಗಿ ಶೋಧ ಮುಂದುವರೆಸಿರುವುದಾಗಿ ಮಾಹಿತಿ ನೀಡಿದ್ದಾರೆ.