ಬೆಂಗಳೂರು | ಮೆಟ್ರೋ ಹಳಿಗೆ ಹಾರಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ: ಪ್ರಾಣಾಪಾಯದಿಂದ ಪಾರು
ಬೆಂಗಳೂರು : ನೇರಳೆ ಮಾರ್ಗದ ಮೆಟ್ರೋ ಹಳಿಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಾಣಾಪಾಯದಿಂದ ಪಾರಾಗಿರುವಂತಹ ಘಟನೆ ನಗರದ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಮಂಗಳವಾರ ವರದಿಯಾಗಿದೆ.
ಬಿಹಾರ ಮೂಲದ ಸಿದ್ದಾರ್ಥ್(30) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮಂಗಳವಾರ ಮಧ್ಯಾಹ್ನದ ವೇಳೆಗೆ ವೈಟ್‍ಫೀಲ್ಡ್ ಕಡೆಯಿಂದ ಕೆಂಗೇರಿ ಕಡೆಗೆ ಮೆಟ್ರೋ ರೈಲು ತೆರಳುತ್ತಿತ್ತು. ಈ ವೇಳೆ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಸಿದ್ದಾಥ್ ಆತ್ಮಹತ್ಯೆಗೆ ಯತ್ನಿಸಿದ್ದು, ಮೆಟ್ರೋ ನಡುವೆ ಸಿಲುಕಿದ ಕಾರಣ ಜೀವಕ್ಕೆ ತೊಂದರೆಯಾಗಿಲ್ಲ. ರೈಲ್ವೆ ಚಾಲಕರು ವೇಗವನ್ನು ಗಣನೀಯವಾಗಿ ತಗ್ಗಿಸಿದ್ದರು.
ತಕ್ಷಣವೇ ರೈಲು ಸಂಚಾರ ಬಂದ್ ಮಾಡಿದ ಮಹಿಳಾ ಸಿಬ್ಬಂದಿಯು ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಯಾವುದೇ ಗಾಯಗಳು ವರದಿಯಾಗಿಲ್ಲ. ಆತ್ಮಹತ್ಯೆಗೆ ಯತ್ನಿಸಿದ ಸಿದ್ದಾರ್ಥನನ್ನು ಜ್ಞಾನಭಾರತಿ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನಲೆ ನೇರಳೆ ಮಾರ್ಗದ ಮೆಟ್ರೋ ರೈಲು ಸಂಚಾರದಲ್ಲಿ ಕೆಲ ನಿಮಿಷ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿದ್ದು, ಮಧ್ಯಾಹ್ನ 2:30 ಗಂಟೆಗೆ ಸೇವೆ ಪುನರಾರಂಭಿಸಲಾಯಿತು. ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಬದಲು ಮೈಸೂರು ರಸ್ತೆ ಮೆಟ್ರೋ ನಿಲ್ದಾಣದವರೆಗೆ 2 ರೈಲುಗಳು ಶಾರ್ಟ್ ಲೂಪ್‍ನಲ್ಲಿ ಕಾರ್ಯನಿರ್ವಹಿಸಿದವು ಎಂದು ಮೆಟ್ರೋ ಮುಖ್ಯ ಸಾರ್ವಜನಿಕ ಸಂಪರ್ಕಧಿಕಾರಿ ತಿಳಿಸಿದ್ದಾರೆ.