‘ಪರಿಶಿಷ್ಟರ ಕಲ್ಯಾಣ ಸಮಿತಿ ಅಧ್ಯಕ್ಷ ಸ್ಥಾನದಿಂದ ನರೇಂದ್ರಸ್ವಾಮಿ ಅವರನ್ನು ತೆಗೆದು ಹಾಕಿ’ : ಸಿಎಂಗೆ ದಲಿತ ಸಂಘಟನೆಗಳ ಒಕ್ಕೂಟ ಮನವಿ
ಬೆಂಗಳೂರು : ‘ಸ್ವಾರ್ಥ, ಸ್ವಪ್ರತಿಷ್ಠೆ, ಎಸ್ಸಿ-ಎಸ್ಟಿ ಸಮುದಾಯದ ಜನರಿಗೆ ನ್ಯಾಯ ಕೊಡಿಸುವಲ್ಲಿ ವಿಫಲವಾಗಿರುವ ‘ವಿಧಾನ ಮಂಡಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಸಮಿತಿ ಅಧ್ಯಕ್ಷ ಸ್ಥಾನದಿಂದ ಪಿ.ಎಂ.ನರೇಂದ್ರಸ್ವಾಮಿ ಅವರನ್ನು ಕೂಡಲೇ ಪದಚ್ಯುತಿಗೊಳಸಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟದ ನಿಯೋಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಗುರುವಾರ ವಿಧಾನಸೌಧದಲ್ಲಿ ಎಸ್ಎಸ್ಡಿ ರಾಜ್ಯಾಧ್ಯಕ್ಷ ಬಿ.ಚನ್ನಕೃಷ್ಣಪ್ಪ ನೇತೃತ್ವದ ನಿಯೋಗವು ಸಿಎಂಗೆ ಮನವಿ ಸಲ್ಲಿಸಿದ್ದು, ‘ಕಲ್ಯಾಣ ಸಮಿತಿ ಅಧ್ಯಕ್ಷ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಾವು ಪ್ರತಿನಿಧಿಸುತ್ತಿರುವ ದಲಿತ ಸಮುದಾಯಕ್ಕೆ ಮುಗ್ಗಲಮುಳ್ಳಾಗಿರುವುದು ನೋವಿನ ಸಂಗತಿ. ಅದರಲ್ಲೂ ಅವರ ದುರಂಹಕಾರದ ನಡವಳಿಕೆ, ದಲಿತ ಚಳವಳಿಯ ನಾಯಕರ ಬಗೆಗಿನ ಅವಾಚ್ಯ ಮಾತುಗಳು ಅವರ ಉದ್ದಟತನ ಸಹಿಸಲು ಸಾಧ್ಯವಿಲ್ಲ’ ಎಂದು ಎಚ್ಚರಿಸಿದ್ದಾರೆ.
ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಕೋಟ್ಯಂತರ ರೂ.ಹಣವನ್ನು ಅನ್ಯ ಉದ್ದೇಶಕ್ಕೆ ಸರಕಾರ ಬಳಕೆ ಮಾಡಿದರೂ ಸಮಿತಿ ಅಧ್ಯಕ್ಷರಾಗಿ ಮೌನಕ್ಕೆ ಶರಣಾಗಿದ್ದಾರೆ. ಎಸ್ಸಿ-ಎಸ್ಟಿ ವರ್ಗದ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದೆ. ಇದನ್ನು ಪ್ರಶ್ನಿಸುವ ದಲಿತ ಸಂಘಟನೆಗಳ ಮುಖಂಡರ ಮೇಲೆ ನರೇಂದ್ರಸ್ವಾಮಿ ದರ್ಪ ಮರೆಯುವ ಮೂಲಕ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಆದ್ದರಿಂದ ಅವರಿಗೆ ಯಾವುದೇ ಜವಾಬ್ದಾರಿಯುತ ಸ್ಥಾನ ನೀಡಬಾರದು ಎಂದು ಒಕ್ಕೂಟ ಮನವಿ ಮಾಡಿದೆ.
ನಿಯೋಗದಲ್ಲಿ ಮುಖಂಡರಾದ ಸಿದ್ದಪ್ಪ, ಎಚ್.ಮಾರಪ್ಪ, ಆರ್ಎಂಎನ್ ರಮೇಶ್, ಗೋಪಾಲಕೃಷ್ಣ ಅರಳಹಳ್ಳಿ, ಕಮಲಮ್ಮ, ನಾರಾಯಣಪ್ಪ, ಮುತ್ತುರಾಜ್, ರಾಜಗೋಪಾಲ್ ಸೇರಿದಂತೆ ಇನ್ನಿತರರು ಇದ್ದರು.